ಹುಬ್ಬಳ್ಳಿ: ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದ ಕರ್ನಾಟಕ ಸರ್ಕಾರದ ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಅಂತ್ಯ ಸಂಸ್ಕಾರ ಶನಿವಾರ ಅವರ ಹುಟ್ಟೂರಾದ ಯರಗುಪ್ಪಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.


COMMERCIAL BREAK
SCROLL TO CONTINUE READING

ಸಿ.ಎಸ್.ಶಿವಳ್ಳಿ ಅವರ ತಂದೆ-ತಾಯಿಯ ಸಮಾಧಿ ಪಕ್ಕದಲ್ಲೇ ಈಶ್ವರ ಲಿಂಗದ ಆಕೃತಿಯಲ್ಲಿ 12 ಅಡಿ ಉದ್ದ ಮತ್ತು 12 ಅಡಿ ಅಗಲವಾದ ಸಮಾಧಿ ನಿರ್ಮಿಸಿ, ಹಾಲಮತ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನವನ್ನು ನೆರವೇರಿಸಿ ಶಿವಳ್ಳಿ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. 


ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ಹುಬ್ಬಳ್ಳಿಗೆ ವಿಮಾನದ ಮೂಲಕ ಆಗಮಿಸಿ, ರಸ್ತೆ ಮಾರಗವಾಗಿ ಯರಗುಪ್ಪಿಗೆ ತೆರಳಿ ಶಿವಳ್ಳಿ ಅವರ ಅಂತಿಮ ದರ್ಶನ ಪಡೆದರು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮತ್ತು ಬಸವರಾಜ್ ಹೊರಟ್ಟಿ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಎಂ.ಬಿ.ಪಾಟೀಲ್, ಜಮೀರ್ ಅಹಮದ್, ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು, ಅಂತಿಮ ನಮನ ಸಲ್ಲಿಸಿದರು.


ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಸಲಹೆ ಮೇರೆಗೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಶಿವಳ್ಳಿ ಅವರು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಿವಳ್ಳಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದರು.