ಬೆಂಗಳೂರು: ತೀವ್ರ ಬರಗಾಲದಿಂದ ಕಂಗೆಟ್ಟಿರುವ ರಾಜ್ಯದ ಬಹುತೇಕ ಭಾಗಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳಲು ಅನುವಾಗುವಂತೆ ಎನ್.ಡಿ.ಆರ್.ಎಫ್ ವತಿಯಿಂದ ಶೀಘ್ರವೇ ಪರಿಹಾರ ಬಿಡುಗಡೆ ಮಾಡಬೇಕೆಂದು ಕೋರಿ ಪ್ರಧಾನಮಂತ್ರಿ, ಕೇಂದ್ರದ ಗೃಹ ಮತ್ತು ಕೃಷಿ ಸಚಿವರಿಗೆ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೋಮವಾರ ಪತ್ರದ ಮೂಲಕ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಕೈಕೊಟ್ಟ ಹಿಂಗಾರು:
"ರಾಜ್ಯದಲ್ಲಿ ಹಿಂಗಾರು ಕೈಕೊಟ್ಟಿದ್ದು ಇಡೀ ರಾಜ್ಯದಲ್ಲಿ ಶೇಕಡ 49ರಷ್ಟು ಮಳೆ ಕೊರತೆ ಎದುರಾಗಿದೆ. ಅದರಲ್ಲೂ ಉತ್ತರ ಒಳನಾಡಿನಲ್ಲಿ ಬಿತ್ತನೆ ಮಾಡಿರುವ ಶೇಕಡ 90ರಷ್ಟು ಹಿಂಗಾರು ಬೆಳೆ ಒಣಗುತ್ತಿದ್ದು, ಆ ಭಾಗದಲ್ಲಿ ಶೇಕಡ 67ರಷ್ಟು ತೀವ್ರ ಮಳೆ ಕೊರತೆ ಎದುರಾಗಿದೆ" ಎಂದು ತಮ್ಮ ಪತ್ರದಲ್ಲಿ ದೇಶಪಾಂಡೆ ಕಳವಳ ವ್ಯಕ್ತಪಡಿಸಿದ್ದಾರೆ.


ಒಂದೆರಡು ದಿನಗಳಲ್ಲಿ ನ್ಯಾಷನಲ್ ಎಕ್ಸಿಕ್ಯುಟೀವ್ ಕಮಿಟಿಯ ಉಪಸಮಿತಿಗೆ ವರದಿ ಸಲ್ಲಿಕೆ:
ರಾಜ್ಯದ ಮನವಿಗೆ ಸ್ಪಂದಿಸಿ ಕೇಂದ್ರ ಸರಕಾರವು ಬರ ಅಧ್ಯಯನಕ್ಕೆ ಕಳಿಸಿದ್ದ 10 ಸದಸ್ಯರ ತಂಡವು ತನ್ನ ವರದಿಯನ್ನು ಒಂದೆರಡು ದಿನಗಳಲ್ಲಿ ನ್ಯಾಷನಲ್ ಎಕ್ಸಿಕ್ಯುಟೀವ್ ಕಮಿಟಿಯ ಉಪಸಮಿತಿಗೆ ಸಲ್ಲಿಸುವ ನಿರೀಕ್ಷೆಯಿದೆ. ಹೀಗಾಗಿ, ಪರಿಹಾರ ಬಿಡುಗಡೆ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಶೀಘ್ರವೇ ರಾಜ್ಯಕ್ಕೆ ಎನ್.ಡಿ.ಆರ್.ಎಫ್. ನಿಧಿಯಿಂದ ಪರಿಹಾರವನ್ನು ಬಿಡುಗಡೆ ಮಾಡಿ, ನೆರವಿಗೆ ಧಾವಿಸಬೇಕು. ಇದರಿಂದಾಗಿ, ಬರದಿಂದ ತತ್ತರಿಸುತ್ತಿರುವ ರೈತರಿಗೆ ಕ್ಷಿಪ್ರಗತಿಯಲ್ಲಿ ಒಂದಿಷ್ಟಾದರೂ ಪರಿಹಾರ ಒದಗಿಸಲು ಸಹಾಯವಾಗುತ್ತದೆ ಎಂದು ಕಂದಾಯ ಸಚಿವರು ಪತ್ರಮುಖೇನ ಕೋರಿದ್ದಾರೆ.


ಪ್ರಧಾನಿ ನರೇಂದ್ರ ಮೋದಿಯವರಲ್ಲದೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೂ ದೇಶಪಾಂಡೆಯವರು ಈ ಪತ್ರವನ್ನು ರವಾನಿಸಿದ್ದಾರೆ.