ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಬಿಸಿಬಿಸಿ ಚರ್ಚೆಯಲ್ಲಿರುವ ವಿಚಾರವಾಗಿದೆ. ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿದರು. ವಿಪಕ್ಷಗಳು ವಿನಾಕಾರಣ ವಿವಾದ ಮಾಡಿದವರು. ರಾಮನ ಹೆಸರು ಹೇಳಲು ಇಷ್ಟವಿಲ್ಲದ್ದಕ್ಕೆ ಈಗ ಈ ವಿವಾದ ಶರುವಾಗಿದೆ ಎಂದು ಆರೋಪಿಸಿದರು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: WATCH: ಬೇಬಿಬೆಟ್ಟದಲ್ಲಿರುವ ಮಠಕ್ಕೆ ನುಗ್ಗಿ ಬೇಟೆಯಾಡಿದ ಚಿರತೆ!


ಸಚಿವ ಆರ್.ಆಶೋಕ್ ಸಮರ್ಥನೆ: 


ಪಠ್ಯ ಪುಸ್ತಕ ಸತ್ಯ ಮಿತ್ಯ ಹೇಳಲಾಗುವುದು. ಪಠ್ಯ ಪುಸ್ತಕ ಬಗ್ಗೆ ಇಷ್ಟು ವಿವಾದ ಆಗಿರಲಿಲ್ಲ. ಆರ್‌ಎಸ್‌ಎಸ್ ನ ಹೆಗಡೆವಾರ್ ಬಗ್ಗೆ ಇಡೀ ದೇಶಕ್ಕೆ ಈ ವಿವಾದದಿಂದ ಗೊತ್ತಾಯಿತು. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಮಾಡಲಾಯಿತು. ಆಗ ಹಿಂದೂ, ಹಿಂದೂ ಮಹಾಸಾಗರ, ಶಿವಾಜಿ ಹಾಗೂ ಇನ್ನಿತರೆ ವಿಷಯಗಳನ್ನ ಕೈ ಬಿಡಲಾಯಿತು. ಸದ್ಯ ಕುವೆಂಪು ಬಗ್ಗೆ ಬಹಳಷ್ಟು ಚರ್ಚೆ ಆಗಿದೆ. 8 ಗದ್ಯ ಹಾಗೂ ಪದ್ಯ ಇದ್ದ ಕುವೆಂಪು ಪಾಠಗಳನ್ನು 7 ಕ್ಕೆ ಇಳಿಸಿದ್ದು ಇವರೇ. ಯೋಗ ಹಾಗೂ ಭಾರತೀಯ ಪರಂಪರೆ, ಅಜ್ಜನ ಅಭ್ಯಂಜನ ಹಾಗೂ ಇತರೆ ಪಾಠಗಳನ್ನು ಕೈ ಬಿಟ್ಟಿದ್ದರು. ಈಗ ನಮ್ಮ ಸರ್ಕಾರ 7 ಕುವೆಂಪು ಪಾಠವನ್ನ 10 ಪಾಠ ಮಾಡಿದ್ದೇವೆ ಎಂದು ಹೇಳಿದರು.


ಹಿಂದೂ ಧರ್ಮದ ಭಾವನೆಗೆ ಧಕ್ಕೆ ಬರುವ ವಿಷಯ ತೆಗೆದುಹಾಕಲಾಗಿದೆ:


ಕುವೆಂಪು ಬಗ್ಗೆ ಪರಿಚಯ ತಪ್ಪಾಗಿದೆ ಎಂದು ಮಾತು ಬಂದಿದೆ. ಆದರೆ ಇದೆ ಮಾತು ಸಿದ್ದರಾಮಯ್ಯ ಅವರ ಕಾಲದ ಪಠ್ಯದಲ್ಲೂ ಇತ್ತು. ನಮ್ಮ ಸರ್ಕಾರ ಕೆಂಪೇಗೌಡರ ಕನಸು ಎಂಬ ಪಾಠವನ್ನು ಸೇರಿಸಿದೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಇವರ ಪಾಠವನ್ನು ತೆಗೆದು ಹಾಕಲಾಯಿತು. ಟಿಪ್ಪು ಬಗ್ಗೆ ಒಂದು ಪೇಜ್ ಬರೆಯಬಹುದು. ಬ್ರಿಟಿಷರ ವಿರುದ್ಧ ಹೋರಾಟ ಬಿಟ್ಟರೆ ಏನು ಬರೆಯಲು ಸಾದ್ಯ? ಮತಾಂತರ ಬಗ್ಗೆ ಉಲ್ಲೇಖವಿಲ್ಲ. ಟಿಪ್ಪು ಮತ್ತು ಹೈದರಾಲಿ ಬಗ್ಗೆ ವೈಭವೀಕರಣ. 7 ನೇ ತರಗತಿ ಸಮಾಜ ವಿಜ್ಞಾನದಲ್ಲಿ ದಿಲ್ಲಿಯ ಸುಲ್ತಾನರು ಪಾಠ ಇದೆ. ಹಿಂದೂ ಧರ್ಮದ ಭಾವನೆಗೆ ಧಕ್ಕೆ ಬರುವ ವಿಷಯ ತೆಗೆದುಹಾಕಲಾಗಿದೆ ಎಂದರು.


ಮುಸ್ಲಿಂ ದಾಳಿ ಬಗ್ಗೆ ವಿಚಾರ ಇಲ್ಲ:


ಮುಸ್ಲಿಂ ದಾಳಿ ಬಗ್ಗೆ ವಿಚಾರ ಇಲ್ಲ. ಪೃಥ್ವಿರಾಜ್ ಚೌಹಾಣ್ ಹಾಗೂ ಮೊಹಮದ್ ಘೋರಿ ವಿಷಯ ತಿರುಚಿಲಾಗಿದೆ. ನಮ್ಮ ಸರ್ಕಾರದಲ್ಲಿ ಮರೆಯಲಾಗದ ವಿಜಯನಗರ ಸಾಮ್ರಾಜ್ಯ ಎಂಬ ಶೀರ್ಷಿಕೆ ಇತ್ತು. ಇವರು ವಿಜಯನಗರ ಮನೆತನ ಎಂದು ಹೆಸರು ಬದಲಿಸಿದರು. ಎಲ್ಲಾ ಕಾಂಗ್ರೆಸ್ ಕುಟುಂಬ ರೀತಿ ಮಾಡಿದ್ದಾರೆ. ಮಹಾತ್ಮ ಗಾಂಧಿ ಪಂಜಾಬ್ ಗಲಭೆ ಸಂದರ್ಭದಲ್ಲಿ ಕೊಲ್ಕತ್ತಾದಲ್ಲಿ ಗೀತೆ ಪಠಣೆ ಬಗ್ಗೆ ವಿಷಯ ತೆಗೆದುಹಾಕಲಾಗಿದೆ. ರಜಪೂತರ ಗುಣಧರ್ಮಗಳ ಬಗ್ಗೆ 2015ರ ಮೂಲಪಠ್ಯದಲ್ಲಿ ಕೊಟ್ಟಿದ್ದ ಎಲ್ಲ ಅಂಶಗಳನ್ನು ಬರಗೂರು ಸಮಿತಿ ಕೈಬಿಟ್ಟಿತು. ರಜಪೂತರ ಬಗ್ಗೆ, ಅವರ ಕ್ಷಾತ್ರದ ಬಗ್ಗೆ ಇದ್ದ ಎಲ್ಲ ಮೆಚ್ಚುಗೆಯ ನುಡಿಗಳಿಗೆ ಬರಗೂರು ಕತ್ತರಿ ಹಾಕಿದರು. ಅಲ್ಲದೆ, ರಜಪೂತರ ಬಗ್ಗೆ ಇದ್ದ ಪಾಠದಲ್ಲಿ (6ನೇ ತರಗತಿ) ಹಲವಾರು ಚಿತ್ರಗಳನ್ನು ಕಡಿತಗೊಳಿಸಿದರು. ರಜಪೂತರ ಶಿಲ್ಪ, ವಾಸ್ತುವೈಭವಗಳನ್ನು ತೋರಿಸುವ ಬಹಳಷ್ಟು ಒಳ್ಳೆಯ ಚಿತ್ರಗಳನ್ನು ಬರಗೂರು ಸಮಿತಿ ಕೈಬಿಟ್ಟು ಪಾಠದ ಪುಟಸಂಖ್ಯೆಗಳನ್ನು ಕಡಿಮೆ ಮಾಡಿತು ಎಂದರು. 


ಮೊಘಲರ ಇತಿಹಾಸಕ್ಕೆ ಹೆಚ್ಚು ಪುಟ ಕೊಡುವ ದೃಷ್ಟಿಯಿಂದ ಹಾಗೂ ಮೊಘಲರ ಕಲೆ, ಸಂಸ್ಕೃತಿ ವಿವರಗಳನ್ನೇ ಹೆಚ್ಚು ವೈಭವೀಕರಿಸುವ ದೃಷ್ಟಿಯಿಂದ ರಜಪೂತರ ಬಗ್ಗೆ ಇದ್ದ ಎಲ್ಲ ವಿವರಗಳನ್ನೂ ಬರಗೂರು ಸಮಿತಿ ಕಡಿತಗೊಳಿಸಿತು. ಸರ್ವಾಧಿಕಾರದಿಂದ ರಾಷ್ಟ್ರಪ್ರೀತಿ ಹೆಚ್ಚುತ್ತದೆ ಎಂಬ ಪಾಠ! ಸಮತಾವಾದದ ಹೆಸರಿನಲ್ಲಿ ಕಮ್ಯುನಿಸಮ್ ಅತ್ಯುತ್ತಮ ಪ್ರಭುತ್ವ ವ್ಯವಸ್ಥೆ ಎಂದು ಬಿಂಬಿಸುವ ಯತ್ನ! ಸಮಾಜವಿಜ್ಞಾನ ಹೆಸರಿನಲ್ಲಿ ಕಮ್ಯುನಿಸಮ್ ಪಾಠ, ಇದು 'ಪಕ್ಷಪುಸ್ತಕ' ಅಲ್ಲವಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. 


ಅಂಬೇಡ್ಕರ್, ಗಾಂಧೀಜಿ ಕುರಿತ ವಿಷಯ ಮರುಸೇರ್ಪಡೆ:


ಹತ್ತನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿದ್ದ ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿ ಅವರ ಕುರಿತ ಮಾಹಿತಿ ಹೊಂದಿದ 'ಉದಾತ್ತ ಚಿಂತನೆಗಳು' ಪಾಠವನ್ನು ಸಿದ್ಧರಾಮಯ್ಯ ಸರ್ಕಾರ ತೆಗೆದುಹಾಕಿ ಬರೀ ಸ್ವಾಮಿ ವಿವೇಕಾನರದರ ಮಾಹಿತಿ ಮಾತ್ರ ನೀಡಲಾಗಿತ್ತು. ಈಗ ಡಾ.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳ ಸಹಿತ ಇಡೀ ಪಾಠವನ್ನು ಮರುಸೇರ್ಪಡೆ ಮಾಡಿದೆ ಎಂದರು.


ಭಗತ್ ಸಿಂಗ್, ನಾರಾಯಣಗುರು, ಪೆರಿಯಾರ್ ಪಾಠ ಬಿಟ್ಟಿಲ್ಲ:


ಭಗತ್ ಸಿಂಗ್ ಪಾಠ ಕೈ ಬಿಟ್ಟ ಬಗ್ಗೆ ವಿವಾದ ಸೃಷ್ಟಿಸಿದ್ದು, ಪಾಠ ಕೈ ಬಿಟ್ಟಿಲ್ಲ. ಸಮಾಜ ವಿಜ್ಞಾನ ವಿಷಯದಲ್ಲಿ ಪಠ್ಯದ ಹೊರೆ ಹೆಚ್ಚಾಗಿದ್ದ ಕಾರಣ, ಈ ಮಹನೀಯರನ್ನೊಳಗೊಂಡ ಪಾಠವನ್ನು ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿ ಸೇರಿಸಿದೆ. ಟಿಪ್ಪು, ತುಘಲಕ್, ಮೊಘಲ್ ದೊರೆಗಳ ವಿಚಾರಗಳನ್ನು ಪುಟಗಟ್ಟಲೇ ಬರೆದು, ಭಾರತೀಯ ರಾಜರುಗಳ ಸಾಹಸ, ಶೌರ್ಯಗಳನ್ನು ಮಕ್ಕಳಿಗೆ ಪರಿಚಯಿಸಿರಲಿಲ್ಲ. ಇದನ್ನು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಸರಿಪಡಿಸಿದೆ ಎಂದು ಹೇಳಿದರು. 


ಇದನ್ನೂ ಓದಿ: Earthquake: ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ


ಸಿದ್ದರಾಮಯ್ಯ ಸರ್ಕಾರದ ಅವಧಿಯ ಪಠ್ಯಪುಸ್ತಕದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿತವಾಗಿ, ಮುದ್ರಣವಾಗಿದ್ದ 8ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿ 'ಸಿಂಧೂ ಸಂಸ್ಕೃತಿ' ಪಾಠ ತೆಗೆದು ನೆಹರೂ ಪತ್ರಗಳು ಪಾಠ ಸೇರಿಸಿದ್ದರು. ಪ್ರಸ್ತುತ 8 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಪುಟಸಂಖ್ಯೆ 12ರಲ್ಲಿ 'ಸಿಂಧೂ-ಸರಸ್ವತಿ ನಾಗರಿಕತೆ' ಪಠ್ಯ ಸೇರಿಸಿದೆ. ಭಾರತೀಯತೆ ಕುರಿತು ಕೆ.ಎಸ್.ನರಸಿಂಹಸ್ವಾಮಿ ಅವರ 'ಭಾರತೀಯತೆ' ಕವನವನ್ನು ಸಿದ್ಧರಾಮಯ್ಯ ಸರ್ಕಾರದಲ್ಲಿ ಕೈ ಬಿಡಲಾಗಿತ್ತು. ಈಗ ಮರು ಸೇರ್ಪಡೆ ಮಾಡಿದೆ ಎಂದರು.


ಸ್ವಾತಂತ್ರ್ಯ ಹೋರಾಟಗಾರರಾದ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರು ಸೇರ್ಪಡೆ: ಪರಿಷ್ಕರಣೆ ನೆಪದಲ್ಲಿ ಕೈ ಬಿಡಲಾಗಿದ್ದ ನಿಟ್ಟೂರು ಶ್ರೀನಿವಾಸರಾಯರ ಪಾಠವನ್ನು ಮರುಸೇರ್ಪಡೆ ಮಾಡಲಾಗಿದೆ ಎಂದರು.


ಚೆನ್ನಭೈರಾದೇವಿ ಕನ್ನಡ ರಾಣಿಯ ಬಗ್ಗೆ ಪ್ರಥಮ ಬಾರಿ ಪಠ್ಯ ಪುಸ್ತಕದಲ್ಲಿ ಸೇರ್ಪಡೆ: 


ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳನ್ನು ಸಮರ್ಥವಾಗಿ ಮತ್ತು ಜನಾನುರಾಗಿಯಾಗಿ 54 ವರ್ಷಗಳವರೆಗೆ (ಕ್ರಿ.ಶ. 1552ರಿಂದ 1606) ಆಳಿದ ಚೆನ್ನಭೈರಾದೇವಿ, ಕನ್ನಡ ರಾಣಿಯ ವಿರುದ್ಧ ಪದೇ ಪದೇ ಯುದ್ಧ ಮಾಡಿ ಸೋತ ಪೋರ್ಚುಗೀಸರಿಂದಲೇ 'ಕಾಳುಮೆಣಸಿನ ರಾಣಿ' ಎಂಬ ಹೆಗ್ಗಳಿಕೆಯನ್ನು ಪಡೆದ ಚೆನ್ನಭೈರಾದೇವಿ ರಾಣಿಯವರ ಪಾಠ ಸೇರ್ಪಡೆ ಮಾಡಿದೆ ಎಂದು ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.