ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಮೂರನೇ ಡೋಸ್‌ ಲಸಿಕೆಯನ್ನು 17% ರಷ್ಟು ಮಂದಿ ಮಾತ್ರ ಪಡೆದಿದ್ದಾರೆ. ಉಚಿತವಾಗಿ ನೀಡುತ್ತಿದ್ದರೂ ಲಸಿಕೆ ಪಡೆಯದಿರುವುದು ತೀವ್ರ ಬೇಸರದ ಸಂಗತಿ. ಉತ್ತಮ ಆರೋಗ್ಯಕ್ಕಾಗಿ ಅರ್ಹರೆಲ್ಲರೂ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮನವಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು. ಮೊದಲ ಹಾಗೂ ಎರಡನೇ ಡೋಸ್‌ ಲಸಿಕಾಕರಣ ಪ್ರಮಾಣ 100% ದಾಟಿದ್ದರೂ, ಮೂರನೇ ಡೋಸ್‌ನ ಲಸಿಕಾಕರಣ 17% ರಷ್ಟು ಮಾತ್ರ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಡೋಸ್‌ ಕೂಡ ಉಚಿತವಾಗಿ ನೀಡಲು ಕ್ರಮ ವಹಿಸಿದ್ದಾರೆ. ಆದರೂ ಈ ಡೋಸ್‌ ಪಡೆದವರ ಪ್ರಮಾಣ ಕಡಿಮೆ ಇದೆ. ಲಕ್ಷಾಂತರ ಲಸಿಕೆ ಡೋಸ್‌ ಲಭ್ಯವಿದ್ದರೂ ಜನರು ಮುಂದೆ ಬಾರದಿರುವುದು ಬೇಸರ ತಂದಿದೆ. ಲಸಿಕೆ ಪಡೆದವರಲ್ಲಿ 6-7 ತಿಂಗಳ ನಂತರ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಮೂರನೇ ಡೋಸ್‌ ನೀಡಲಾಗುತ್ತಿದೆ. ಮೂರನೇ ಡೋಸ್‌ ಪಡೆದರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಸ್ಪತ್ರೆಗೆ ದಾಖಲಾದರೂ ಸಾವು ಸಂಭವಿಸುವ ಸ್ಥಿತಿ ಸೃಷ್ಟಿಯಾಗುವುದಿಲ್ಲ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : 


ರಾಜ್ಯದಲ್ಲಿ ಈ ತಿಂಗಳ 10 ರವರೆಗೂ 24 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು 60 ವರ್ಷ ವಯಸ್ಸು ಮೇಲ್ಪಟ್ಟವರಾಗಿದ್ದಾರೆ. ಯುವಜನರು ಲಸಿಕೆ ಪಡೆಯುವುದರೊಂದಿಗೆ ತಮ್ಮ ಮನೆಯ ಹಿರಿಯರಿಗೂ ಕೊಡಿಸಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ 7.2% ಕೋವಿಡ್‌ ಪಾಸಿಟಿವಿಟಿ ದರ ಇದೆ. ಆದರೆ ಕೆಲ ಜಿಲ್ಲೆಗಳಲ್ಲಿ ರಾಜ್ಯದ ಪಾಸಿಟಿವಿಟಿ ದರಕ್ಕಿಂತ ಹೆಚ್ಚು ದರ ದಾಖಲಾಗಿದೆ. ಧಾರವಾಡದಲ್ಲಿ ಅತಿ ಹೆಚ್ಚು ದಾಖಲಾಗಿದೆ. ರಾಜ್ಯದಲ್ಲಿ ಪ್ರತಿ ದಿನ 30 ಸಾವಿರ ಮಾದರಿಗಳನ್ನು ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಯಂತೆ, ರೋಗ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ದೇಶದಲ್ಲಿ ಈವರೆಗೆ 9 ಮಂಕಿ ಪಾಕ್ಸ್‌ ಪ್ರಕರಣ ಪತ್ತೆಯಾಗಿದೆ. ಆದರೆ ರಾಜ್ಯದಲ್ಲಿ ಈವರೆಗೂ ಪ್ರಕರಣ ಕಂಡುಬಂದಿಲ್ಲ. ಆದರೂ ಗಡಿ ಭಾಗದ ಐದಾರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಆಸ್ಪತ್ರೆಗಳಲ್ಲೂ ಅದಕ್ಕೆ ಬೇಕಾದ ಔಷಧಿ, ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದರು.


ರಾಜ್ಯದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ಇದೇ ಸಮಯದಲ್ಲಿ 419 ಮಲೇರಿಯಾ ಪ್ರಕರಣ ಕಂಡುಬಂದರೆ, ಈ ಬಾರಿ 114 ಕಂಡುಬಂದಿದೆ. ಇದು ಕಡಿಮೆ ಪ್ರಮಾಣದಲ್ಲಿದೆ. ಆದರೆ ಕಳೆದ ವರ್ಷ 1,266 ಡೆಂಘೀ ಪ್ರಕರಣ ಕಂಡುಬಂದಿದ್ದು, ಈ ವರ್ಷ 4,405 ಆಗಿದೆ. ಹಾಗೆಯೇ, ಈ ಬಾರಿ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣ ಹೆಚ್ಚಿದೆ. ಕಳೆದ ವರ್ಷ ಚಿಕೂನ್‌ಗುನ್ಯಾ ಪ್ರಕರಣ *454 ಇದ್ದು, ಈ ಬಾರಿ 978 ಆಗಿದೆ. ಎಚ್‌1ಎನ್‌1 ಕಳೆದ ವರ್ಷ 3 ಇದ್ದು, ಈ ಬಾರಿ 345 ಆಗಿದೆ ಎಂದು ವಿವರಿಸಿದರು.


ಇದನ್ನೂ ಓದಿ : 


ತುಮಕೂರು, ಧಾರವಾಡ, ಬೆಂಗಳೂರಿನಲ್ಲಿ 16, 21 ವರ್ಷ ವಯಸ್ಸಿನವರು ಕೋವಿಡ್‌ ಸೋಂಕಿಗೊಳಗಾಗಿ ಮೃತಪಟ್ಟಿದ್ದಾರೆ. ಇದು ಬಹಳ ದುರದೃಷ್ಟಕರವಾಗಿದ್ದು, ಅವರ ಡೆತ್‌ ಆಡಿಟ್‌ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಕೋರ್ಬಿವ್ಯಾಕ್ಸ್‌ ಎಂಬ ಹೊಸ ಲಸಿಕೆಯನ್ನು ಹೈದರಾಬಾದ್‌ ಸಂಸ್ಥೆ ಆವಿಷ್ಕಾರ ಮಾಡಿದ್ದು, ಅದಕ್ಕೆ ಪರವಾನಗಿ ದೊರೆತಿದೆ. ಮೂರನೇ ಡೋಸ್‌ ಆಗಿ ಕೋರ್ಬಿವ್ಯಾಕ್ಸ್‌ ಪಡೆಯಲು ನಾಳೆಯಿಂದ ಅವಕಾಶವಿದೆ. 60 ವರ್ಷ ವಯಸ್ಸು ಮೇಲ್ಪಟ್ಟವರು, ಕೋ ಮಾರ್ಬಿಡಿಟಿ ಇರುವವರು ಕಡ್ಡಾಯವಾಗಿ 3 ನೇ ಡೋಸ್‌ ಪಡೆಯಬೇಕು ಎಂದು ಕೋರಿದರು. ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳನ್ನು ನಿರಾಕರಿಸುವ ಬಗ್ಗೆ ದೂರು ಬಂದಿದೆ. ಇದು ಅಮಾನವೀಯ ನಡೆ. ಇಂತಹ ಪ್ರಕರಣ ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ವಹಿಸಲಾಗುವುದು. ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯಕ್ಕೆ ದಂಡ ವಿಧಿಸುವ ಪ್ರಸ್ತಾಪ ಇಲ್ಲ. ಪರಿಸ್ಥಿತಿ ನೋಡಿಕೊಂಡು ಮತ್ತೆ ಸಭೆ ನಡೆಸಿ ಚರ್ಚಿಸಲಾಗುವುದು. ಮಾಸ್ಕ್‌ ವಿಚಾರದಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಎಲ್ಲರೂ ಮಾಸ್ಕ್‌ ಧರಿಸುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಸ್ತಾಪ ಸರ್ಕಾರ ಮುಂದೆ ಇಲ್ಲ ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.