ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಶಾಸಕ ಕೆ.ಸುಧಾಕರ್ ನೇಮಕ
ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಅವರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಕೆ.ಸುಧಾಕರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಅತೃಪ್ತ ಕಾಂಗ್ರೆಸ್ ಶಾಸಕರ ಬಂಡಾಯ ಶಮನಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿರುವ ಸಮ್ಮಿಶ್ರ ಸರ್ಕಾರ, ಸಂಪುಟ ವಿಸ್ತರಣೆ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿ ಭಿನ್ನಾಭಿಪ್ರಾಯ ಶಮನಕ್ಕೆ ಯತ್ನಿಸಿದ್ದು, ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಅವರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಕೆ.ಸುಧಾಕರ್ ಅವರು, "ನನಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ ನಮ್ಮ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ, ನಮ್ಮ ನಾಯಕ ಸಿದ್ದರಾಮಯ್ಯ ಅವರಿಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ನನ್ನ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಹಾಗೂ ನನ್ನ ಕಾರ್ಯ ಕ್ಷಮತೆಯನ್ನು ನಂಬಿ ಈ ಸ್ಥಾನಕ್ಕೆ ನೇಮಕ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ನಾಲ್ಕು ತಿಂಗಳ ಹಿಂದೆಯೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕೆ.ಸುಧಾಕರ್ ಅವರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಶಿಫಾರಸು ಮಾಡಿದ್ದರು. ಆದರೆ, ತಜ್ಞರನ್ನೇ ಮಂಡಳಿಗೆ ನೇಮಕ ಮಾಡಬೇಕೆಂದು ಕಾರಣ ನೀಡಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಶಿಫಾರಸನ್ನು ಒಪ್ಪಿರಲಿಲ್ಲ ಎನ್ನಲಾಗಿದೆ.