ಶಾಸಕ ಮುನಿರತ್ನ ಅಭಿನಯದ `ಆಸಿಡ್ ಮೊಟ್ಟೆ` ಸಿನಿಮಾ 100 ದಿನ ಓಡಿಸಿ: ಮಾಜಿ ಸಂಸದ ಡಿಕೆ ಸುರೇಶ್
`ಆಸಿಡ್ ಮೊಟ್ಟೆ ದಾಳಿ ಪ್ರಕರಣ ಪೂರ್ವನಿಯೋಜಿತ. ಶಾಸಕ ಮುನಿರತ್ನ ಅಭಿನಯದ `ಆಸಿಡ್ ಮೊಟ್ಟೆ` ಸಿನಿಮಾ 100 ದಿನ ಓಡಿಸಿ` ಎಂದು ಮಾಜಿ ಸಂಸದ ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದರು.
ಬೆಂಗಳೂರು: "ಆಸಿಡ್ ಮೊಟ್ಟೆ ದಾಳಿ ಪ್ರಕರಣ ಪೂರ್ವನಿಯೋಜಿತ. ಶಾಸಕ ಮುನಿರತ್ನ ಅಭಿನಯದ 'ಆಸಿಡ್ ಮೊಟ್ಟೆ' ಸಿನಿಮಾ 100 ದಿನ ಓಡಿಸಿ" ಎಂದು ಮಾಜಿ ಸಂಸದ ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದರು.
ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. "ವಿಡಿಯೋ ಪ್ರಕರಣ ಹಾಗೂ ಮಾಧ್ಯಮದ ವರದಿಗಳನ್ನು ನೋಡಿದಾಗ ಬಿಜೆಪಿ ಶಾಸಕರು, ನನ್ನ ಮೇಲೆ, ನನ್ನ ಸಹೋದರ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹಾಗೂ ಅವರ ತಂದೆ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ದಿನದಿಂದ ದಿನಕ್ಕೆ ಕಡಿಮೆ ಆಗ್ತಿದೆ ಸಾರಾ ಮೇಲಿನ ಬಟ್ಟೆ: ಸಚಿನ್ ಪುತ್ರಿಗೂ ಬಂತಾ ಬಾಲಿವುಡ್ ಬೆಡಗಿಯರ ಚಾಳಿ..
ಈ ವಿಡಿಯೋ ಅತ್ಯುತ್ತಮವಾಗಿ ಮೂಡಿ ಬಂದಿದೆ. ಆಸಿಡ್ ದಾಳಿ ಎಂದ ಮೂರು ಸೆಕೆಂಡ್ ನಲ್ಲಿ ಮೊಟ್ಟೆ ಎಸೆಯಲಾಗಿದೆ. ಕನ್ನಡ ಚಿತ್ರರಂಗದ ಅಧ್ಯಕ್ಷ, ನಿರ್ಮಾಪಕರು, ಚಿತ್ರಕಥೆ ತಿರುಚುವ ಕೆಲಸ ಮಾಡಿದ್ದ ಮುನಿರತ್ನ, ಈಗ ತಾವೇ ನಟನೆಗೂ ಇಳಿದಿದ್ದಾರೆ ಎಂದು ಈ ವಿಡಿಯೋ ನೋಡಿದ ಮೇಲೆ ನನಗೆ ತಿಳಿಯಿತು. ಅದಕ್ಕಾಗಿ ಒಳ್ಳೆ ಡ್ರಾಮಾ ಮಾಡಿ ಮಾಧ್ಯಮಗಳ ಕೈಗೆ ನೀಡಿದ್ದಾರೆ. ಮಾಧ್ಯಮಗಳು ಕೂಡ ಏನೂ ಸುದ್ದಿ ಇಲ್ಲ ಎಂದು ಇದನ್ನು ಚೆನ್ನಾಗಿ ಬಿತ್ತರಿಸಿದ್ದೀರಿ. ಅಭಿನಯ ಮಾಡಿದ ಅವರಿಗೂ ಅಭಿನಂದನೆ, ಅದನ್ನು ತೋರಿಸಿದ ನಿಮಗೂ ಅಭಿನಂದನೆಗಳು.
ಈ ವಿಚಾರವಾಗಿ ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಅವರು ಅನೇಕ ಸಿನೆಮಾ ಮಾಡಿದ್ದು, ಕೆಲವು ಡಬ್ಬಾ ಯಶಸ್ವಿಯಾದರೆ, ಮತ್ತೆ ಕೆಲವು ಯಶಸ್ವಿಯಾಗಿಲ್ಲ. ಹೀಗಾಗಿ ಹೊಸ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಮೊದಲು ಮಾಧ್ಯಮಗಳನ್ನು ಬಳಸಿಕೊಂಡು ಮಾರುಕಟ್ಟೆ ಇದ್ದರೆ ನಂತರ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಎಲ್ಲವನ್ನು ಸಿಬಿಐ ತನಿಖೆಗೆ ನೀಡಲಿ:
ಈ ಪ್ರಕರಣವನ್ನು ಸಿಬಿಐಗೆ ನೀಡಲಿ. ಅವರು ಗೃಹಮಂತ್ರಿಗೆ ಪತ್ರ ಬರೆದು ಎಸ್ ಪಿಜಿ ಭದ್ರತೆಯನ್ನೇ ಪಡೆಯಲಿ. ಕಾರಣ ಅವರ ಬಳಿ ರಘು ಎಂಬ ಚಾಲಕ ಇದ್ದ. ಅವನು ಏನಾದ ಎಂದು ತಿಳಿಯಬೇಕಲ್ಲವೇ. ಉಳಿದ ವಿಚಾರಗಳನ್ನು ಮಾಧ್ಯಮಗಳೇ ತನಿಖೆ ಮಾಡಿ ಪ್ರಸಾರ ಮಾಡಿ. ಮತ್ತೊಬ್ಬ ಮಳ್ಳತಹಳ್ಳಿ ರಂಜಿತ್ ಎಂಬ ಹುಡುಗನ ಕೈ ಕಾಲು ಮುರಿದಿದ್ದಾರೆ. ಇಷ್ಟು ದಿನ ಅವರ ಖಾಸಗಿ ವಿಚಾರ ಮಾತನಾಡಬಾರದು ಎಂದು ಸುಮ್ಮನೆ ಇದ್ದೆ. ಈ ಪ್ರಕರಣಗಳನ್ನು ಸಿಬಿಐ ತನಿಖೆಯಾಗಲಿ ಎಂದು ಪತ್ರ ಬರೆಯಲಿ. ಅವರ ಹೈಕಮಾಂಡ್ ಗೆ ಕೊಟ್ಟಿರುವ ವರದಿಯಲ್ಲಿ ಇದನ್ನು ಸೇರಿಸಲಿ.
ಮತದಾರರ ನಕಲಿ ಗುರುತಿನ ಚೀಟಿ ಪ್ರಕರಣದಲ್ಲಿ ಬಾಲಾಜಿ ಎಂಬುವವರು ತಿರುಪತಿ ಲಡ್ಡು ತೆಗೆದುಕೊಂಡು ಹೋಗಿ ಕೊಟ್ಟರಂತೆ. ಇದರ ಮೇಲೂ ಸಿಬಿಐ ತನಿಖೆಯಾಗಲಿ.
ನಮ್ಮ ಹೆಸರು ಹೇಳಿದರೆ ಮಾತ್ರ ಅವರ ಸಿನಿಮಾ ನಡೆಯುವುದು:
ನನ್ನನ್ನು ಸೋಲಿಸಿದರು ಎಂದು ಹೇಳುತ್ತಾರೆ. ನನ್ನನ್ನು ಸೋಲಿಸಿದವರು ಜನರೇ ಹೊರತು ಬಿಜೆಪಿ ನಾಯಕರಲ್ಲ ಎಂದು ಫಲಿತಾಂಶ ಬಂದ ದಿನವೇ ಹೇಳಿದ್ದೇನೆ. ಇವರ ಯೋಗ್ಯತೆಗೆ ನನ್ನ ಸೋಲಿಸಲು ಆಗುವುದಿಲ್ಲ. ಜನ ತೀರ್ಮಾನಿಸಿ ನನ್ನನ್ನು ಸೋಲಿಸಿದ್ದಾರೆ. ಅದನ್ನು ನಾನು ಒಪ್ಪಿದ್ದೇನೆ. ಇವರು ದೊಡ್ಡ ಸಾಧನೆ ಮಾಡಿರುವವರಂತೆ ನನ್ನ ಹೆಸರು ಹೇಳಿಕೊಂಡು ಇವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ನನ್ನ ಹಾಗೂ ನನ್ನ ಅಣ್ಣನ ಹೆಸರು ಹೇಳಿದರಷ್ಟೇ ಇವರ ಸಿನಿಮಾ ನಡೆಯುತ್ತದೆ.
ಸುಟ್ಟು ಹೋಗಿದ್ದ ಮುನಿರತ್ನ ಕೂದಲು ವಾಪಸ್ ಬಂದಿದೆ:
ಅವರನ್ನು ಪರೀಕ್ಷೆ ಮಾಡಿರುವ ದೊಡ್ಡ ಡಾಕ್ಟರ್, ಕೂದಲು ಸುಟ್ಟಿದೆ ಸಿ.ಟಿ ಸ್ಕ್ಯಾನ್ ಮಾಡಬೇಕು ಎಂದಿದ್ದಾರೆ. ಆದರೆ ನಿನ್ನೆ ಸಂಜೆ ಮತ್ತೊಂದು ವಿಡಿಯೋ ನೋಡಿದ್ದು, ಅದರಲ್ಲಿ ಮುನಿರತ್ನ ಅವರು ಸಿ.ಟಿ. ರವಿ ಅವರನ್ನು ಭೇಟಿ ಮಾಡಿ ಅವರ ಮನೆಯಿಂದ ಹೊರಗೆ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಮುನಿರತ್ನ ಅವರಿಗೆ ಸುಟ್ಟು ಹೋಗಿದ್ದ ಕೂದಲು ಮತ್ತೆ ವಾಪಸ್ ಬಂದಿವೆ. ಮುನಿರತ್ನ ತಲೆಗೆ ಟೋಕನ್ ಹಾಕಿದ್ದಾರೋ, ಅಥವಾ ನಿಜವಾದ ಕೂದಲು ಇಟ್ಟುಕೊಂಡಿದ್ದಾರೋ ಎಂದು ಮಾಧ್ಯಮಗಳೇ ಪರೀಕ್ಷೆ ಮಾಡಬೇಕು. ದೊಡ್ಡ ಡಾಕ್ಟರ್ ಕೂದಲು ಸುಟ್ಟಿದೆ ಎಂದು ಹೇಳಿದ ಮೇಲೆ ನಾವು ನಂಬಲೇ ಬೇಕಲ್ಲವೇ?
ಸಿ.ಟಿ. ರವಿಗೆ ತಮ್ಮ ತಾಯಿ ನೆನಪಾಗಲಿಲ್ಲವೇ:
ಮುನಿರತ್ನ ಒಕ್ಕಲಿಗರ ಹೆಣ್ಣು ಮಕ್ಕಳ ವಿಚಾರದಲ್ಲಿ ಹೇಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಒಕ್ಕಲಿಗ ಹಾಗೂ ದಲಿತ ಮಹಿಳೆಯರನ್ನು ಮಂಚಕ್ಕೆ ಕರೆದು ಅಪಮಾನ ಮಾಡಿದ್ದಾರೆ. ಆತನ ಅಸಭ್ಯ ವರ್ತನೆಯ ಆಡಿಯೋ ನಿಜ ಎಂದು ಎಫ್ ಎಸ್ ಎಲ್ ವರದಿಯಲ್ಲಿ ಸಾಬೀತಾಗಿದೆ. ಹೀಗಾಗಿ ಎಸ್ ಐಟಿಯು ಎಫ್ ಐಆರ್ ದಾಖಲಿಸಿದೆ. ಆತ ಹೇಗೆ ನೀಚವಾಗಿ ನಡೆದುಕೊಂಡಿದ್ದಾನೆ ಎಂಬುದನ್ನು ಮಾಧ್ಯಮಗಳು ಸರಿಯಾಗಿ ಜನರಿಗೆ ತೋರಿಸಬೇಕು. ಇಷ್ಟೆಲ್ಲಾ ಆದರೂ ರವಿ ಅವರು ಆತನ ಮನೆಗೆ ಹೋಗಿದ್ದಾರೆ. ಅವರು ತಮ್ಮ ತಾಯಿಯನ್ನು ಮರೆತು ಅವರ ಮನೆಗೆ ಹೋಗಿದ್ದಾರೆ.
ಪಾಪ, ಬಿಜೆಪಿಯವರು ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ:
ಒಬ್ಬ ವಿಧಾನ ಪರಿಷತ್ತಿನಲ್ಲಿ ಮಹಿಳೆಗೆ ವೇ* ಎಂದು ಕರೆಯುತ್ತಾರೆ. ಮತ್ತೊಬ್ಬ ಸರ್ಕಾರದ ಆಡಳಿತ ನಡೆಸುವ ದೇವಾಲಯದಲ್ಲಿ ಮಹಿಳೆಯರ ಅತ್ಯಾಚಾರ ಮಾಡುತ್ತಾನೆ. ಬಿಜೆಪಿಯವರು ಇಂತಹವರನ್ನು ಒಪ್ಪಿಕೊಂಡು ಕೂತಿದ್ದಾರೆ. ಇಷ್ಟಾದರೂ ಪಾಪ, ಬಿಜೆಪಿಯವರು ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ.
ವಿಕಾಸಸೌಧದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೊಂಡಿದ್ದನ್ನು ಮಾಧ್ಯಮದವರಿಗೆ ತೋರಿಸಲು ಸಾಧ್ಯವಾಗಲಿಲ್ಲ. ವಿಧಾನ ಪರಿಷತ್ತಿನಲ್ಲಿ ನಡೆದ ನೀಚ ಕೃತ್ಯವನ್ನು ಪ್ರಶ್ನೆ ಮಾಡಲಿಲ್ಲ. ಈ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಲಿ. ನಾನು ಇಂತಿಂತಹ ಮಾಧ್ಯಮಕ್ಕೆ ಇಷ್ಟು ಪ್ರಮಾಣದ ಸಹ ಮಾಲೀಕ ಎಂದು ಹೇಳುತ್ತಾರೆ. ಇದಕ್ಕೆ ಬೇಕಾದ ದಾಖಲೆಯನ್ನು ನಾನು ನೀಡುತ್ತೇನೆ.
ಅವರು ನಿಮ್ಮ ಮಾಧ್ಯಮ ಸಂಸ್ಥೆಗಳ ಸಹ ಮಾಲೀಕರಾಗಿದ್ದರೆ ಅದನ್ನು ಪ್ರಶ್ನೆ ಮಾಡುವ ನೈತಿಕತೆ ಮಾಧ್ಯಮದವರಿಗೆ ಇಲ್ಲವೇ? ರಾಜಕೀಯ ವಿಚಾರದಲ್ಲಿ ನನ್ನ ಬಗ್ಗೆ ಕೇವಲವಾಗಿ ಮಾತನಾಡುತ್ತೀರಿ. ವಿಕಾಸಸೌಧದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ಈ ಪವಿತ್ರ ಜಾಗವನ್ನು ಮೋಜು ಮಸ್ತಿಗೆ ಬಳಸಿರುವುದು ಬಿಜೆಪಿ ನಾಯಕರ ಕಣ್ಣಿಗೆ ಕಾಣುತ್ತಿಲ್ಲವೇ?
ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ಆದರೆ ಬಿಜೆಪಿ ಶಾಸಕರೆ ಈ ವಿಚಾರವಾಗಿ ನಾನು ಮಾತನಾಡುವಂತೆ ಉತ್ತೇಜನ ನೀಡಿದ್ದಾರೆ. ನಮ್ಮ ಬಗ್ಗೆ ನಿರ್ಧಾರ ಮಾಡಬೇಕಿರುವುದು ಜನರು. ನಿಮ್ಮ ವಿರುದ್ಧ ಏನೆಲ್ಲಾ ಹಗರಣಗಳಿವೆ ಎಂದು ಲೋಕಾಯುಕ್ತ ಸಂಸ್ಥೆ ತನಿಖೆಯಲ್ಲಿದೆ. ಮಾತೆತ್ತಿದರೆ ಡಿ.ಕೆ. ಶಿವಕುಮಾರ್, ಡಿ.ಕೆ ಸುರೇಶ್. ನಾನು ಎಂದೂ ಮುನಿರತ್ನ, ಕೊರಂಗು ಎಂದು ಹೇಳಿಲ್ಲ. ಕೊರಂಗು ನಿಮ್ಮ ಸಹೋದರ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ. ಕೊರಂಗು ಯಾರು? ಮಾಧ್ಯಮದ ಸ್ನೇಹಿತರು ಹೇಳಬೇಕಲ್ಲವೇ? ಕೊರಂಗು ಬಳಸಿಕೊಂಡು ಮುನಿರತ್ನ ಏನೆಲ್ಲಾ ಮಾಡಿದ್ದಾರೆ ಎಂದು ಮಾಧ್ಯಮಗಳು ಹೇಳಬೇಕಲ್ಲವೇ?
ಬಿಜೆಪಿಯಲ್ಲಿ ಅತ್ಯುತ್ತಮ ನಟರ ದಂಡು:
ರಮೇಶ್ ಜಾರಕಿಹೊಳಿ ಅವರು ಕೂಡ ಶಿವಕುಮಾರ್ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಯಲ್ಲಿ ಎಂತೆಂಥ ನಟರಿದ್ದಾರೆ. ಅದರಲ್ಲಿ ರಮೇಶ್ ಜಾರಕಿಹೊಳಿ ಅವರು ಒಬ್ಬರು. ಇಂತಹ ಕೊಳಕು ವಿಚಾರಗಳ ಬಗ್ಗೆ ಮಾತನಾಡಬಾರದು ಎಂದು ಇಷ್ಟು ದಿನ ಮೌನವಾಗಿದ್ದೆ. ಅವರೇ ನನ್ನ ಬಾಯಲ್ಲಿ ಈ ವಿಚಾರ ಮಾತನಾಡಿಸುತ್ತಿದ್ದಾರೆ.
ಯಡಿಯೂರಪ್ಪ ಅವರ ವಿಚಾರವಾಗಿ ವಿವರಣೆ ನೀಡುವುದಾಗಿ ಯಾರೋ ಮಹಿಳೆ ವಿಜಯೇಂದ್ರ ಅವರ ಸಮಯ ಕೇಳಿದ್ದಾರಲ್ಲವೇ? ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಸಮಯ ನೀಡಲಿ. ಇದರ ಹಿಂದಿರುವ ರಹಸ್ಯವೇನು ಎಂದು ತಿಳಿಯಲು ಮಾಧ್ಯಮಗಳು ವಿಜಯೇಂದ್ರ ಜತೆ ಮಾತನಾಡಿ ಸಮಯ ಕೊಡಿಸಲಿ. ಈ ಎಲ್ಲಾ ಪ್ರಕಾರಣಗಳನ್ನು ಸಿಬಿಐಗೆ ನೀಡಲಿ.
ಸಿ.ಟಿ. ರವಿ ಅವರು ಆರ್.ಅಶೋಕ್ ಅವರನ್ನು ಕರೆದುಕೊಂಡು ಹೋಗಿ ಸಿಬಿಐ ತನಿಖೆಗೆ ನೀಡಲಿ.
ಪ್ರಶ್ನೋತ್ತರ
ಎಸ್ ಐಟಿ ಎಫ್ ಐಆರ್ ನಲ್ಲಿ ಏಡ್ಸ್ ಟ್ರಾಪ್ ಸೇರಿದಂತೆ ಇತರ ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸಿರುವ ಬಗ್ಗೆ ಕೇಳಿದಾಗ, "ಬಿಜೆಪಿಯವರಿಗೆ ನೈತಿಕತೆ ಇದ್ದರೆ ಯಾವ ರೀತಿ ಮಟ್ಟ ಹಾಕಬೇಕು, ಶಿಕ್ಷೆ ನೀಡಬೇಕೋ ಅದನ್ನು ಮಾಡುತ್ತಾರೆ. ಆದರೆ ಬಿಜೆಪಿಯವರ ಬಳಿ ನೈತಿಕತೆ, ಸಂಸ್ಕೃತಿ ಏನೂ ಇಲ್ಲ. ಅವರು ಹೇಳುವುದೊಂದು ಮಾಡುವುದೊಂದು. ಅವರಿಗೆ ಹೇಳಿ ಪ್ರಯೋಜನವಿಲ್ಲ. ಸಮಯ ಬಂದಾಗ ಜನರೇ ಉತ್ತರ ನೀಡುತ್ತಾರೆ. ಮಾಧ್ಯಮಗಳಿಗಾಗಿ ಒಳ್ಳೊಳ್ಳೆ ಸಿನಿಮಾ ಬರುತ್ತಿವೆ. ತಮಿಳುನಾಡಿನಲ್ಲಿ ಚಾಟಿ ಏಟಿನ ಸಿನಿಮಾ ಬಂದಿದೆ. ಮುನಿರತ್ನ ಸಿನಿಮಾಗೆ ಏನೆಂದು ಕರೆಯಬಹುದು? ಆಸಿಡ್ ಮೊಟ್ಟೆ ಎಂದು ಕರೆಯಬಹುದೇ? ಮುನಿರತ್ನಗೆ ಒಳ್ಳೆಯ ಹೆಸರು ಸಲಹೆ ನೀಡಿ. ಅವರು ನಮ್ಮ ಜತೆ ಇದ್ದರೂ ನಾಲ್ಕೈದು ವರ್ಷಗಳಿಂದ ಬಿಜೆಪಿ ಸೇರಿದ್ದಾರೆ. ಅಲ್ಲಿಗೆ ಹೋಗಿ ಹೊಸ ಹೊಸ ಐಡಿಯಾ ಮಾಡುತ್ತಿದ್ದಾರೆ. ಮೊಟ್ಟೆಯೊಳಗೆ ಆಸಿಡ್ ಹೇಗೆ ಹಾಕಬಹುದು, ಕೂದಲು ಸುಟ್ಟಿದೆ ಎಂದು ಸಿ.ಟಿ ಸ್ಕ್ಯಾನ್ ಮಾಡೋದು, ಮರುದಿನ ಕೂದಲು ವಾಪಸ್ ಬರೋ ಐಡಿಯಾ ಬರುವುದು ಯಾರಿಗೆ? ಸಿನಿಮಾದವರಿಗೆ ಅಲ್ಲವೇ. ಗ್ರಾಫಿಕ್ಸ್ ಮಾಡೋದು ಅವರೇ ಅಲ್ಲವೇ? ಇದೆಲ್ಲವನ್ನು ಮಾಧ್ಯಮದವರು ರಾಜ್ಯದ ಜನರಿಗೆ ಸರಿಯಾಗಿ ತೋರಿಸಿ ಎಂದು ಕೈಮುಗಿದು ಕೇಳುತ್ತೇನೆ" ಎಂದು ತಿರುಗೇಟು ನೀಡಿದರು.
ಶೀಘ್ರದಲ್ಲೇ ಪೊಲೀಸ್ ಆಯುಕ್ತರಿಗೆ ದೂರು
ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರು ಬಳಸಿಕೊಂಡಿದ್ದಾರೆ ಎಂದು ಕೇಳಿದಾಗ, "ನಾನು ಕೂಡ ನಾಲ್ಕೈದು ದಿನಗಳ ಹಿಂದೆ ಇದನ್ನು ಗಮನಿಸಿದೆ. ಯಾರೇ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೂ ತನಿಖೆ ಮಾಡಲಿ. ನಾನು ಇದನ್ನು ಪರಿಶೀಲಿಸಿ, ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಎರಡು ಮೂರು ದಿನಗಳಲ್ಲಿ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತೇನೆ. ಯಾರೇ ಈ ತಪ್ಪು ಮಾಡಿದ್ದರೂ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಅನ್ಯಾಯ ಆಗಿರುವವರಿಗೆ ನ್ಯಾಯ ಸಿಗಬೇಕು" ಎಂದು ತಿಳಿಸಿದರು.
ಶ್ವೇತಾ ಗೌಡ ಅವರ ಪ್ರಕರಣದಲ್ಲಿ ಬಿಜೆಪಿ ನಾಯಕನ ಹೆಸರು ಕೇಳಿಬಂದಾಗ ಬಂಧನ ಆಗಿ ವಿಚಾರಣೆ ನಡೆಯುತ್ತಿದೆ, ಈ ಪ್ರಕರಣದಲ್ಲಿ ಆ ರೀತಿ ಆಗಿಲ್ಲ. ಈ ತಾರತಮ್ಯ ಏಕೆ ಎಂದು ಕೇಳಿದಾಗ, "ನನಗೆ ಈ ವಿಚಾರ ಗೊತ್ತಿಲ್ಲ. ನಾನು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಕೇಳುತ್ತೇನೆ" ಎಂದು ತಿಳಿಸಿದರು.
ನಟ ಧರ್ಮ ಅವರು ನಿಮ್ಮ ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಕೇಳಿದಾಗ, "ಕೆಲವು ಸಿನಿಮಾದವರು ಸೇರಿ ಈ ರೀತಿ ಮಾಡುತ್ತಿದ್ದಾರೆ. ನಾನು ಏನು ಮಾಡಲಿ. ಈ ಪ್ರಕರಣದ ಬಗ್ಗೆ ನಾನು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತಿದ್ದೇನೆ. ನಿಮಗೂ ಆ ದೂರಿನ ಪತ್ರ ಕಳುಹಿಸಿಕೊಡುತ್ತೇನೆ" ಎಂದು ತಿಳಿಸಿದರು.
ಐಶ್ವರ್ಯಾ ಅವರು ಕಾಂಗ್ರೆಸ್ ಸೇರಿದ್ದರಾ ಎಂದು ಕೇಳಿದಾಗ, "ಅವರು ಒಂದು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಮತ್ತೊಮ್ಮೆ ಅಣ್ಣಮ್ಮ ದೇವಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಷ್ಟು ಬಿಟ್ಟರೆ ನನಗೂ ಆಕೆಗೂ ಬೇರೆ ಸಂಬಂಧ ಇಲ್ಲ. ನನಗೆ ಇರುವುದು ಒಬ್ಬಳೇ ತಂಗಿ. ನನಗೆ ಗೊತ್ತಿಲ್ಲದೆ ಇನ್ನೊಬ್ಬ ತಂಗಿ ಯಾರು ಎಂದು ನಮ್ಮ ಅಣ್ಣಾ ಬೇಜಾರಾಗಿದ್ದಾನಂತೆ" ಎಂದು ಹಾಸ್ಯ ಚಟಾಕಿ ಹಾರಿಸಿದರು.
ಆಕೆ ನಿಮಗೆ ಬೆಳ್ಳಿ ಖಡ್ಗ ಕೊಟ್ಟಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಕೇಳಿದಾಗ, "ನಾನು ಆ ಕ್ಷಣದಲ್ಲೇ ಅದನ್ನು ದೇವಸ್ಥಾನಕ್ಕೆ ವಾಪಸ್ ನೀಡಿದ್ದೆ. ನಾನು ಹಾಗೂ ನನ್ನ ಅಣ್ಣ ಅಂತಹ ಉಡುಗೊರೆಯನ್ನು ಅಲ್ಲೇ ವಾಪಸ್ ನೀಡುತ್ತೇವೆ. ಅವುಗಳನ್ನು ಮನೆಗೆ ವಾಪಸ್ ತರುವುದಿಲ್ಲ" ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ