ಬೆಂಗಳೂರು: ನನಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ನಾನು ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನನ್ನನ್ನು ಯಾರೂ ಅಪಹರಿಸಿಲ್ಲ ಎಂದು ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ ಇ-ಮೇಲ್ ಮೂಲಕ ಸ್ಪೀಕರ್‌ಗೆ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಶ್ರೀಮಂತ ಪಾಟೀಲ ಅವರು ಇ-ಮೇಲ್ ಮೂಲಕ ಕಳುಹಿಸಿದ ಪತ್ರವನ್ನು ಇಂದಿನ ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಓದಿದರು. "ನಾನು ರೆಸಾರ್ಟ್‌ನಿಂದ ಚೆನ್ನೈಗೆ ಕೆಲಸಕ್ಕೆ ತೆರಳಿದ್ದೆ. ಅಲ್ಲಿ ಕೆಲಸ ಮುಗಿಸಿ ಹಿಂತಿರುಗಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿತು. ಆಗ ಏನು ಮಾಡಬೇಕೆಂದು ತಿಳಿಯದೆ ಕುಟುಂಬದ ವೈದ್ಯರಿಗೆ ಕರೆ ಮಾಡಿದಾಗ ಅವರು ಮುಂಬೈಗೆ ಬರಲು ತಿಳಿಸಿದರು. ಹಾಗಾಗಿ ಅಲ್ಲಿ ಅಡ್ಮಿಟ್ ಆಗಿದ್ದೇನೆ. ನಾನು ಯಾವ ಬಿಜೆಪಿ ನಾಯಕರನ್ನೂ ಸಂಪರ್ಕಿಸಿಲ್ಲ. ಯಾರೂ ನನ್ನನ್ನು ಅಪಹರಿಸಿಲ್ಲ. ಲೆಟರ್ ಹೆಡ್ ಇಲ್ಲದ ಪತ್ರದಲ್ಲಿ ತಮಗೆ(ಸ್ಪೀಕರ್) ಸಂದೇಶ ಕಳುಹಿಸಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದೀರಿ. ಅದು ತರಾತುರಿಯಲ್ಲಿ ಕಳುಹಿಸಿದ ಪತ್ರ. ಒಂದು ವೇಳೆ ನಾನು ಆಸ್ಪತ್ರೆಗೆ ದಾಖಲಾಗುವುದು ಪೂರ್ವನಿಯೋಜಿತವೇ ಆಗಿದ್ದರೆ ಲೆಟರ್ ಹೆಡ್ ನಲ್ಲಿಯೇ ನಿಮಗೆ ಪತ್ರ ಕಳುಹಿಸುತ್ತಿದ್ದೆ. ಹಾಗಾಗಿ ಈಗ ಸಲ್ಲಿಸಿರುವ ಪತ್ರವನ್ನು ಮಾನ್ಯ ಮಾಡಿ ಸದನಕ್ಕೆ ಗೈರಾಗಲು ಅನುಮತಿ ನೀಡಿ" ಎಂದು ಪತ್ರದಲ್ಲಿ ಹೇಳಿದ್ದಾರೆ. ಗೈರಾಗುವ ಬಗ್ಗೆ ಅವರು ಕಳುಹಿಸಿರುವಮನವಿ ಪತ್ರಕ್ಕೆ ನಿಯಮದ ಪ್ರಕಾರ ಕೈಗೊಳ್ಳುತ್ತೇನೆ ಎಂದ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.


ಗುರುವಾರ ನಡೆದ ಸದನದಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲರನ್ನು ಅಪಹರಣ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಿ ಶುಕ್ರವಾರ ಬೆಳಿಗ್ಗೆ ವರದಿ ಸಲ್ಲಿಸುವಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ ನೀಡಿದ್ದರು.