ಬೆಂಗಳೂರು: ಅತೃಪ್ತ ಶಾಸಕರ ರಾಜಿನಾಮೆಗೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು 18 ಪುಟಗಳ ಮತ್ತೊಂದು ಪ್ರಮಾಣಪತ್ರವನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಪ್ರಮಾಣಪತ್ರದಲ್ಲಿ ಶಾಸಕರು ಯಾವ ಯಾವ ದಿನಾಂಕದಂದು ರಾಜೀನಾಮೆ ನೀಡಿದರು, ಜುಲೈ 6 ರಿಂದ ಜುಲೈ 13ರವರೆಗ ಏನೆಲ್ಲಾ ಬೆಳವಣಿಗೆಗಳು ನಡೆದವು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. 


ಅಲ್ಲದೆ, ಅತೃಪ್ತ ಶಾಸಕರು ತಮ್ಮ ವಿರುದ್ಧ ನೀಡಿರುವ ದೂರಿನಲ್ಲಿ ಯಾವಿದೆ ಹುರುಳಿಲ್ಲ. ಅದು ದುರುದ್ದೇಶದಿಂದ ಕೂಡಿದ್ದು, ಜುಲೈ 6 ರಂದು ನನಗೆ ಮಾಹಿತಿ ನೀಡದೆ ಕಚೇರಿಗೆ ಬಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಶಾಸಕರಿಗೆ ನಮ್ಮ ಕಚೇರಿಯಿಂದ ಸ್ವೀಕೃತಿ ಪತ್ರವನ್ನು ನೀಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ಗೆ  ತಿಳಿಸಿದ್ದಾರೆ.


ಜುಲೈ 6ರಂದು ಸಲ್ಲಿಸಿದ್ದ 13 ರಾಜೀನಾಮೆ ಪತ್ರಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ 5 ರಾಜೀನಾಮೆಗಳು ಕ್ರಮಬದ್ಧವಾಗಿವೆ, ಉಳಿದ 8 ರಾಜೀನಾಮೆಗಳು ಕ್ರಮಬದ್ಧವಾಗಿರಲಿಲ್ಲ. ಈ ಬೆಳವಣಿಗೆಯನ್ನು ರಾಜ್ಯಪಾಲರ ಗಮನಕ್ಕೂ ತರಲಾಗಿದೆ. ಜುಲೈ 10 ರಂದು ಮತ್ತೆ 11 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಇಡೀ ಪ್ರಕ್ರಿಯೆಯ ವಿಡಿಯೋ ದಾಖಲೆಗಳನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್  ಜನರಲ್ ಅವರಿಗೆ ಸಲ್ಲಿಸಲಾಗಿದೆ. ಇದೇ ವೇಳೆ ರಾಜೀನಾಮೆ ಸಲ್ಲಿಸಿದ 8 ಮಂದಿ  ಶಾಸಕರ ವಿರುದ್ಧವೂ ಅನರ್ಹತೆ ಪ್ರಕರಣಗಳು ದಾಖಲಾಗಿವೆ ಎಂದು ಸ್ಪೀಕರ್ ತಿಳಿಸಿದ್ದಾರೆ.


ಜುಲೈ 10 ರಂದು ಈ ಶಾಸಕರ ವಿರುದ್ಧ ಕಾಂಗ್ರೆಸ್ ಅನರ್ಹತೆ ಅರ್ಜಿ ಸಲ್ಲಿಸಿದೆ. ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಹಳ್ಳಿ ವಿರುದ್ಧ ಈ ಮೊದಲೇ ಅನರ್ಹತೆ ದೂರು ದಾಖಲಾಗಿತ್ತು. ಇದರ ಬಗ್ಗೆ ಈಗಾಗಲೇ ವಿಚಾರಣೆ ನಡೆಸಲಾಗಿದೆ. ಈಗ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವ 8 ಶಾಸಕರ ವಿರುದ್ಧವೂ ಅನರ್ಹತೆ ದೂರು ದಾಖಲಾಗಿದೆ. ಇದನ್ನೆಲ್ಲಾ ಪರಿಶೀಲನೆ ನಡೆಸಲು ಸಾಕಷ್ಟು ಸಮಯದ ಅಗತ್ಯ ಇರುವುದರಿಂದ ತಡವಾಗುತ್ತಿದೆ. ಅಲ್ಲದೆ, ಶಾಸಕರು ವಾಸ್ತವಾಂಶವನ್ನು ಮುಚ್ಚಿಟ್ಟು ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ರಮೇಶ್ ಕುಮಾರ್ ಅವರು ಸುಪ್ರೀಂಕೋರ್ಟಿಗೆ ತಿಳಿಸಿದ್ದಾರೆ ಎನ್ನಲಾಗಿದೆ.


ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ರಾಜೀನಾಮೆಗಳನ್ನು ಅಂಗೀಕರಿಸಲು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜುಲೈ 6 ರಂದು ರಾಜೀನಾಮೆ ಸಲ್ಲಿಸಿದ್ದ 10 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜುಲೈ 10 ರಂದು ಶಾಸಕರು ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಬೇಕು ಮತ್ತು ಆ ರಾಜೀನಾಮೆಗಳ ಬಗ್ಗೆ ಅಂದೇ ಸ್ಪೀಕರ್  ತೀರ್ಮಾನಿಸಬೇಕೆಂದು ಸೂಚನೆ ನೀಡಿತ್ತು. 


ಆದರೆ, ರಾಜೀನಾಮೆಗಳನ್ನು ಅಧ್ಯಯನ ಮಾಡಲು ಕಾಲಾವಕಾಶ ಕೋರಿ ಸ್ಪೀಕರ್ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಜುಲೈ 11ರಂದು ತಿಳಿಸಿದ್ದರು. ಇದೇ ವೇಳೆ ಶಾಸಕರ ರಾಜೀನಾಮೆಯಲ್ಲಿ  ಯಾವದೇ ಮುಂದಿನ ಪ್ರಕ್ರಿಯೆ ನಡೆಸದಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದು, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.