ನವದೆಹಲಿ: ದಿನದಿಂದ ದಿನಕ್ಕೆ ಅಡಿಕೆ ಧಾರಣೆ ಕುಸಿಯುತ್ತಿದ್ದು, ಅಡಿಕೆ ಬೆಳೆಗಾರರು ತೀವ್ರ ಕಷ್ಟದಲ್ಲಿದ್ದಾರೆ. ಹಾಗಾಗಿ ವಿದೇಶದಿಂದ ಆಮದಾಗುವ ಅಡಿಕೆಗೆ ಬೆಲೆಯನ್ನು ಹೆಚ್ಚಿಸಬೇಕು.‌ ಆಮದು ಅಡಿಕೆಗೆ ಪ್ರತಿ ಕೆ.ಜಿ.ಗೆ 300 ರೂಪಾಯಿ ದರ ವಿಧಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಾಸಕರಾದ ಹರತಾಳು ಹಾಲಪ್ಪ ಮತ್ತು ಅರಗಾ ಜ್ಞಾನೇಂದ್ರ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡುವಸಲುವಾಗಿ ಕಳೆದ ಮೂರು ದಿನದಿಂದ ದೆಹಲಿಯಲ್ಲೇ ಬೀಡುಬಿಟ್ಟು ಕಡೆಗೂ ಕೇಂದ್ರ ಸಚಿವರನ್ನು ಭೇಟಿಯಾಗಲು ಯಶಸ್ವಿಯಾದ ಶಾಸಕರಾದ ಹರತಾಳು ಹಾಲಪ್ಪ ಮತ್ತು ಅರಗಾ ಜ್ಞಾನೇಂದ್ರ ಭೇಟಿ ವೇಳೆ ಅಡಿಕೆ ಬೆಳೆಗಾರರ ಹಿತಕಾಯುವಂತೆ ಮನವಿ ಮಾಡಿದ್ದಾರೆ.


ಕೇಂದ್ರ ಸಚಿವರ ಭೇಟಿಯ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಬೇಡಿಕೆಗೆ ಕೇಂದ್ರ ಸಚಿವ ಸುರೇಶ್ ಪ್ರಭು ಸ್ಪಂದಿಸಿದ್ದು, ನಮ್ಮ ರೈತರು ಬೆಳೆಯುವ ಅಡಿಕೆಗೆ ಪ್ರತಿ ಕೆ.ಜಿ.ಗೆ 251 ರೂಪಾಯಿಗಿಂತ ಕಡಿಮೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಇದೇ ವೇಳೆ ತಂಬಾಕು ರಹಿತ ಅಡಿಕೆ ಉತ್ಪನ್ನಕ್ಕೆ ಜಿಎಸ್ಟಿ ಕಡಿಮೆಗೆ ಒತ್ತಾಯಿಸಿದ್ದೇವೆ. ಕೇಂದ್ರ ಸಚಿವರು ತೆರಿಗೆ ಕಡಿಮೆ ಮಾಡುವ ಭರವಸೆ ನೀಡಿದ್ದಾರೆಎಂದು ತಿಳಿಸಿದರು. 


ಅಡಿಕೆ ಗುಣಮಟ್ಟದ ಬಗ್ಗೆ ಇದುವರೆಗೂ ನಿರ್ಧಾರವಾಗಿಲ್ಲ. ತಜ್ಞರ ಸಮಿತಿ‌ಯಿಂದ ಅಡಿಕೆ ಗುಣಮಟ್ಟ ತಿಳಿಯುವುದಕ್ಕೆ‌ ಸಾಧ್ಯವಾಗಿದೆ. ವಿದೇಶದಿಂದ ಕಳಪೆ ಗುಣಮಟ್ಟದ ಅಡಿಕೆ ಆಮದಾಗುತ್ತಿದೆ. ಭಾರತೀಯರು ಬೆಳೆಯುವ ಅಡಿಕೆಯ ಗುಣಮಟ್ಟಕ್ಕೆ  ಹೊಲಿಕೆಯಾಗದೆ ಇದ್ದರೆ ಅಂತಹ ಅಡಿಕೆಯನ್ನು ಆಮದು ಮಾಡಿಕೊಳ್ಳಬಾರದು. ಕಳೆಪೆ ಗುಣಮಟ್ಟದ ಅಡಿಕೆಯ ಆಮದು ಮಾಡಿಕೊಳ್ಳುವುದನ್ನು ರದ್ದುಗೊಳಿಸುವಂತೆಯೂ ಕೇಳಿಕೊಂಡಿದ್ದೇವೆ ಎಂದು ಹರತಾಳು ಹಾಲಪ್ಪ ಮತ್ತು ಅರಗಾ ಜ್ಞಾನೇಂದ್ರ ತಿಳಿಸಿದರು.