ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಎಂಎಲ್ಸಿಗಳ ಅಹೋರಾತ್ರಿ ಧರಣಿ
ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯರಿಂದ ವಿಧಾನ ಸೌಧ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿರಿಸಿದೆ.
ಬೆಂಗಳೂರು: ಶಿಕ್ಷಕರ ವೇತನ ತಾರತಮ್ಯ ಸೇರಿದಂತೆ 20 ಕ್ಕೂ ಹೆಚ್ಚು ಬೇಡಿಕೆಗಳನ್ನ ಇಟ್ಟು ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಎಂಎಲ್ಸಿ ಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿರಿಸಿದೆ.
ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಡೆಸುತ್ತಿರುವ ಧರಣಿಯಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಯ ಏಳುಜನ ಸದಸ್ಯರು, ಜೆಡಿಎಸ್ ನ ಆರು ಸದಸ್ಯರು ಮತ್ತು ಕಾಂಗ್ರೆಸ್ ಓರ್ವ ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ.
ಸಚಿವ ತನ್ವೀರ್ ಸೇಠ್ ಪ್ರತಿಕ್ರಿಯೆ -
ನಿನ್ನೆ ಧರಣಿ ನಿರತ ಎಂಎಲ್ಸಿಗಳ ಜೊತೆ ಸಮಾಲೋಚನೆ ನಡೆಸಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್, ಧರಣಿ ನಿರತ ಎಂಎಲ್ಸಿಗಳ ಬಳಿ ಹೋಗಿದ್ದು ನಿಜ. ಸಿಎಂ ಸೂಚನೆಯಂತೆ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳೋಣ ಎಂದು ಅವರ ಮನವೊಲಿಸಲು ತೆರಳಿದ್ದೆ. ಆದರೆ, ಅದಕ್ಕೆ ಧರಣಿ ನಿರತರ ವರ್ತನೆ ಬೇರೆ ರೀತಿಯೇ ಇತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ಶಿಕ್ಷರದ ಕ್ಷೇತ್ರದಿಂದ ಆಯ್ಕೆಯಾದ ಎಂಎಲ್ಸಿಗಳು ಬೇರೆ ಯಾವುದೋ ಉದ್ದೇಶದಿಂದ ಧರಣಿ ನಡೆಸುತ್ತಿದ್ದಾರೆ ಎಂದು ಎನಿಸಿತು ಎಂದು ಸೇಠ್ ತಿಳಿಸಿದರು. ಧರಣಿನಿರತ ಎಂಎಲ್ಸಿಗಳಿಗೆ ನಾನು ಧಮಕಿ ಹಾಕಿದ್ದೇನೆ ಎಂಬುದು ಸುಳ್ಳು ವದಂತಿ, ನಾನು ಯಾವ ದುರ್ವರ್ತನೆಯನ್ನೂ ತೋರಿಸಿಲ್ಲ. ಇದೆಲ್ಲವನ್ನೂ ನಾನೂ ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೇನೆ ಎಂದು ಸೇಠ್ ವಿವರಿಸಿದರು.
ಸೆಪ್ಟಂಬರ್ 15 ರಂದು ಸಿಎಂ ಕರೆದಿರುವ ಸಭೆಗೆ ಅವರನ್ನೂ ಆಹ್ವಾನಿಸುತ್ತೇವೆ. ಶಾಲೆಗಳನ್ನು ಬಂದ್ ಮಾಡುತ್ತೇವೆ ಎಂದು ಧರಣಿನಿರತರು ಹೇಳ್ತಿದ್ದಾರೆ. ಆದರೆ, ಸರ್ಕಾರ ಇದನ್ನೆಲ್ಲಾ ಸಹಿಸುವುದಿಲ್ಲಾ ಎಂಬುದನ್ನು ಸೇಠ್ ಸುದ್ದಿಗಾರರಿಗೆ ಸ್ಪಷ್ಟ ಪಡಿಸಿದರು.
ಎಂಎಲ್ಸಿಗಳ ಮನವೊಲಿಸಲು ಧರಣಿ ಸ್ಥಳಕ್ಕೆ ಕಳೆದ ರಾತ್ರಿ ಮತ್ತೆ ಸಚಿವ ತನ್ವೀರ್ ಸೇಠ್ ತೆರಳಿದರು. ಸಚಿವರು ಬರುತ್ತಿದ್ದಂತೆ ತೆರಳಿದ ಬಸವರಾಜ ಹೊರಟ್ಟಿ ಸಚಿವರ ಜೊತೆ ಏನೂ ಮಾತನಾಡಲಿಲ್ಲ. ಧರಣಿನಿರತರ ಸ್ಥಳಕ್ಕೆ ಸಭಾಪತಿ ಡಿ.ಹೆಚ್ ಶಂಕರ್ ಮೂರ್ತಿ ಸಹ ತೆರಳಿ ಸಂಧಾನಕ್ಕೆ ಪ್ರಯತ್ನಿಸಿದರು. ಸಚಿವರು ಧಮಕಿ ಹಾಕಿದ್ದಾರೆ ಎಂದು ಸಭಾಪತಿಗಳ ಮುಂದೆ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ನಾನು ಈ ರೀತಿ ಮಾತನಾಡಿಲ್ಲಾ ಎಂಬ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹೊರಟ್ಟಿ ಏನಾದ್ರು ಮಾಡ್ಕೊಳ್ಳಿ ಅಂದ್ರೆ ಏನರ್ಥ ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ.
ಸಚಿವರು ಏನಾದ್ರು ಮಾಡ್ಕೊಳ್ಳಿ ಎಂದರೆ ಏನರ್ಥ. ಮಧ್ಯಾಹ್ನ ಸಚಿವರು ಭೇಟಿ ನೀಡಿದ್ದಾಗ ಇದ್ದ ವರ್ತನೆ ಈಗ ಬದಲಾಗಿದೆ ಎಂದು ಹೊರಟ್ಟಿ ಸಿದುಕಿದ್ದಾರೆ. ಇದೇ ವೇಳೆ ಮಾತನಾಡಿದ ಮಾಜಿ ಉಪಸಭಾಪತಿ ಪುಟ್ಟಣ್ಣ ನಮ್ಮದು ತನ್ವೀರ್ ಸೇಠ್ ವಿರುದ್ಧದ ಹೋರಾಟವಲ್ಲಾ, ನಮ್ಮ ಬೇಡಿಕೆಯಷ್ಟೇ ಇಲ್ಲಿ ಮುಖ್ಯ. ಸಚಿವರ ವರ್ತನೆಯಿಂದ ನಮಗೆಲ್ಲಾ ತುಂಬಾ ಬೇಸರವಾಗಿದೆ ಎಂದು ಹೇಳಿದರು.
ಯಾರದ್ದೋ ಮೇಲಿನ ಸಿಟ್ಟನ್ನ ನಮ್ಮ ಮೇಲೆ ಹಾಕ್ತೀರಿ. ನೀವು ಧಮಕಿ ಹಾಕುವ ರೀತಿ ವರ್ತಿಸಲಿಲ್ವಾ..? ನೀವು ನಿಮ್ಮ ಆತ್ಮಸಾಕ್ಷಿಯಾಗಿ ಹೇಳಿ, ನಿಮ್ಮ ಪದಬಳಕೆ ಸರಿಯಲ್ಲಾ ಎಂದು ಹೊರಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.