ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್, ಪ್ರಧಾನಿ ಮೋದಿ ಬ್ಯಾಕ್ ವರ್ಡ್ ಕ್ಲಾಸ್ ಅಲ್ಲ, ಸೂಪರ್ ಕ್ಲಾಸ್ ವ್ಯಕ್ತಿ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರೊಬ್ಬರು ಪ್ರಧಾನಿ ಆಗಿರುವುದನ್ನು ಕಾಂಗ್ರೆಸ್ ಸಹಿಸುತ್ತಿಲ್ಲ ಎನ್ನುವ ಮೋದಿ, 10 ಲಕ್ಷ ರೂ ಬೆಲೆ ಬಾಳುವ ಸೂಟು ಧರಿಸುತ್ತಾರೆ. ಇವರು ಹೇಗೆ ಬ್ಯಾಕ್ ವರ್ಡ್ ಕ್ಲಾಸ್ ನವರಾಗುತ್ತಾರೆ? ಇವರು ಸೂಪರ್ ಕ್ಲಾಸ್ ವ್ಯಕ್ತಿ ಎಂದು ಟೀಕಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳಲ್ಲಿ ಮಾಡಿದ ಸಾಧನೆ ಬಗ್ಗೆ 15 ನಿಮಿಷಗಳ ಪತ್ರಿಕಾಗೋಷ್ಠಿ ನಡೆಸುವಂತೆ ಸವಾಲು ಹಾಕಿದ್ದೆ. ಆದರೆ 56 ಇಂಚಿನ ಎದೆ ಹೊಂದಿರುವ ಪ್ರಧಾನಿ ಇದುವರೆಗೂ ಮಾಧ್ಯಮದವರ ಮುಂದೆ ಬರಲು ಹಿಂಜರಿಯುತ್ತಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿರುವ ಮೋದಿ, ಅವರ ಹಿಂದಿರುವ ಕೆಲವು ಸಂಸ್ಥೆಗಳು ಸ್ವಾತಂತ್ರಕ್ಕೂ ಮುನ್ನ ಸಾಧಿಸಲು ಆಗದೇ ಇರುವುದನ್ನು ಮೋದಿಯವರ ಆಡಳಿತಾವಧಿಯಲ್ಲಿ ನೆರವೇರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದ ಹರಿಪ್ರಸಾದ್, ಸಂವಿಧಾನ ಹಾಗೂ ಮೀಸಲಾತಿ ತಿದ್ದುಪಡಿ ತರಲು ಮುಂದಾಗಿರುವ ಮೋದಿಯ ವಿರುದ್ಧ ನನ್ನ ಹೋರಾಟ ಎಂದು ಹೇಳಿದರು.