ಹಲ್ಲೆ ಪ್ರಕರಣ: ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಜಾ
ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿರುವ ಮೊಹಮದ್ ನಲಪಾಡ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಬಿ.ಪರಮೇಶ್ವರ ಪ್ರಸನ್ನ ಅವರು ಬುಧವಾರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ವಿದ್ವತ್ ಪರ ವಾದ ಮಂಡಿಸಿದ್ದ ಪ್ರಾಸಿಕ್ಯೂಟರ್ ಎಂ.ಎಸ್.ಶ್ಯಾಮಸುಂದರ್ ಅವರು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವಷ್ಟು ಆರೋಪಿಯು ಪ್ರಬಲನಾಗಿದ್ದಾನೆ. ಪ್ರಕರಣದ ಇನ್ನೊಬ್ಬ ಆರೋಪಿ ಶ್ರೀಕೃಷ್ಣ ತಲೆಮರೆಸಿ ಕೊಂಡಿದ್ದಾನೆ. ಹೀಗಾಗಿ, ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು.
ಆರೋಪಿ ಪರ ವಾದ ಮಂಡಿಸಿದ್ದ ವಕೀಲ ಉಸ್ಮಾನ್, ಎದುರಾಳಿ ವಕೀಲರು ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ. ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ಪ್ರಭಾವ ಬೀರಲು ಅವಕಾಶವೇ ಇಲ್ಲ. ಹಾಗಾಗಿ ಮೊಹಮ್ಮದ್ ನಲಪಾಡ್ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು.
ಮಂಗಳವಾರ ವಾದ-ಪ್ರತಿವಾದಗಳನ್ನು ಆಲಿಸಿದ್ದ ಸೆಷನ್ಸ್ ನ್ಯಾಯಾಲಯವು ಇಂದು ತನ್ನ ತೀರ್ಪು ನೀಡಿದ್ದು, ಜಾಮೀನು ಅರ್ಜಿಯನ್ನು ವಜಾ ಗೊಳಿಸಿದೆ.