ಬೆಂಗಳೂರು: ಇಂದು ನಗರದ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್ ಸ್ವಾಮಿನಾಥನ್  ಕೃಷಿ ಹಾಗೂ ರೈತರ ಅಭಿವೃದ್ದಿಯ ವಿಚಾರವಾಗಿ ಚರ್ಚಿಸಿದರು. 


COMMERCIAL BREAK
SCROLL TO CONTINUE READING

 ಇದೇ ವೇಳೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡುತ್ತಾ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಾವಳಿ ಭಾಗ ಇರುವುದರಿಂದ ಸುಮುದ್ರ ಕೃಷಿಗೆ ಉತ್ತೇಜನ ನೀಡಬೇಕೆಂದು ಸಲಹೆ ನೀಡಿದರು. ಅಲ್ಲದೆ ಕೃಷಿ ಅಭಿವೃದ್ದಿಯನ್ನು ಪ್ರಮುಖವಾಗಿ ಮಣ್ಣು, ಇಲ್ಲಿನ ಜೀವ ವೈವಿದ್ಯದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸುಧಾರಣೆಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.


 ಇಸ್ರೇಲ್ ಮಾದರಿಯ ಕೃಷಿ ವಿಧಾನ ಪದ್ದತಿ ಬಗ್ಗೆ ಪ್ರಸ್ತಾಪಿಸಿದ ಅವರು ಕೃಷಿ ಉತ್ಪನ್ನಗಳ ಸಂರಕ್ಷಣೆ ಹಾಗೂ ಸಹಕಾರಿ ನೀರಾವರಿ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವತ್ತ ಸರ್ಕಾರ ಚಿಂತಿಸಬೇಕು ಎಂದರು. ಇದೇ ವೇಳೆ ರಾಜ್ಯವು ಪ್ರತ್ಯೇಕ ತೋಟಗಾರಿಕೆ ಇಲಾಖೆಯನ್ನು ಹೊಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ಸುಧಾರಣೆ ಕ್ರಮಗಳ ಬಗ್ಗೆ ಮಾತನಾಡುತ್ತಾ ಅವರು ಕೃಷಿಯಲ್ಲಿ ಕೇವಲ ಉತ್ಪಾದನೆಗೆ ಪ್ರಾಮುಖ್ಯತೆ ನೀಡುವುದಲ್ಲದೆ ಅದರಿಂದ ಬರುವ ಆದಾಯಕ್ಕೂ ಸಹ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.  


ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ವಾಮಿನಾಥನ್ ಅವರ ಸಲಹೆಗಳನ್ನು ಕೃಷಿ ಅಭಿವೃದ್ದಿಯ ನಿಟ್ಟಿನಲ್ಲಿ ಪರಿಗಣಿಸುವುದಾಗಿ ತಿಳಿಸಿದರು ಎನ್ನಲಾಗಿದೆ. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ರೈತರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸಧ್ಯದಲ್ಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.