ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣ, ಜಾತಿ ರಾಜಕೀಯದಿಂದ ನನ್ನ ತಂದೆ ಸೋತರು: ಡಾ.ಯತೀಂದ್ರ
ಹಣದ ಪ್ರಭಾವ ಮತ್ತು ಜಾತಿ ರಾಜಕಾರಣದಿಂದ ನನ್ನ ತಂದೆ ಸಿದ್ದರಾಮಯ್ಯ ಅವರು ಸೋಲನುಭವಿಸಬೇಕಾಯಿತು ಎಂದು ಶಾಸಕ ಡಾ.ಯತಿಂದ್ರ ಹೇಳಿದ್ದಾರೆ.
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಹಣದ ಪ್ರಭಾವ ಮತ್ತು ಜಾತಿ ರಾಜಕಾರಣದಿಂದ ನನ್ನ ತಂದೆ ಸಿದ್ದರಾಮಯ್ಯ ಅವರು ಸೋಲನುಭವಿಸಬೇಕಾಯಿತು ಎಂದು ಶಾಸಕ ಡಾ.ಯತಿಂದ್ರ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತರ ಪಕ್ಷಗಳ ಹಣದ ಪ್ರಭಾವ ಮತ್ತು ಜಾತಿ ಪ್ರಾಬಲ್ಯದಿಂದ ನನ್ನ ತಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಬೇಕಾಯಿತು. ಆದರೆ ಬಾದಾಮಿ ಜನತೆ ಕೈಬಿಡಲಿಲ್ಲ. ನನ್ನ ತಂದೆಯವರನ್ನು ಗೆಲ್ಲಿಸಿದ್ದಕಾಗಿ ಬಾದಾಮಿ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಇತ್ತೀಚಿಗೆ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರ ವಿರುದ್ಧ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದ್ದರು. ಆದರೆ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಶ್ರೀರಾಮುಲು ವಿರುದ್ಧ ಜಯಸಾಧಿಸಿದ್ದರು.