ಬೆಂಗಳೂರು: ವಿ.ಜಿ. ಸಿದ್ಧಾರ್ಥ್ ಸಾವಿನ ಬಗ್ಗೆ ಬಳ್ಳಾರಿ ವಲಯ ಐಜಿಪಿ ಎಂ. ನಂಜುಂಡಸ್ವಾಮಿ ಲೇಖನ ಬರೆದಿದ್ದು, ಸಿದ್ಧಾರ್ಥ್ ಜೊತೆಗಿನ ಒಡನಾಟದ ಬಗ್ಗೆ ಭಾವನಾತ್ಮಕವಾಗಿ ಲೇಖನ ಬರೆದಿದ್ದು "ಸಿದ್ಧಾರ್ಧ ಬುದ್ಧನಾಗಲು ಹೋದ, ಆತ ನನಗೆ ಎಂದೆಂದಿಗೂ ಬುದ್ಧನೇ" ಎಂದು ಮನಮುಟ್ಟುವ ಲೇಖನ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಕಾಫಿ ಡೇಯ ಸಿದ್ಧಾರ್ಥ ಅವರನ್ನು ನಾನು ಮೊದಲು ನೋಡಿದ್ದು ಅವರ ಮೊದಲ ಕಾಫಿ ಡೇ ಅಂಗಡಿಯಲ್ಲಿ. ನನ್ನ ಕೆಆರ್ ಇಸಿ ಗೆಳೆಯ ಶಶಿ ಮೋಹನ್ ಮತ್ತು ನಾನು ಒಂದು ರಾತ್ರಿ ಜೊತೆಯಲ್ಲಿ ಊಟ ಮಾಡಿದ ನನತರ ಕಾಫಿ ಡೇ ಗೆ ಹೋಗಿದ್ವಿ. ಆಗ ಅದೊಂದು ಕಾಫಿ ಡೇ ಆಗಿತ್ತು.  ಶಶಿ ಮೋಹನ್ ನನಗೆ ಸಿದ್ಧಾರ್ಥ ಅವರ ಪರಿಚಯ ಮಾಡಿಸಿದ. ನಾನು ಆಗತಾನೆ ಹೈದರಾಬಾದ್ ಪೊಲೀಸ್ ಅಕಾಡೆಮಿಯಿಂದ ತರಬೇತಿ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ.


ಬೆಂಗಳೂರು ಜೀವನ ನನಗೆ ಹೊಸದಾಗಿತ್ತು. ಸಿದ್ಧಾರ್ಥ್ ಅಂದು ಕಾಫಿ ಡೇಯಲ್ಲಿ ಕೆಲಸ ಮಾಡುವ ಹುಡುಗರಂತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಧರಿಸಿದ್ದರು.


ಮೊದಲ ಭೇಟಿಯಲ್ಲಿಯೇ ನಾವಿಬ್ಬರೂ ಬಹಳ ಮಾತಾಡಿದೆವು. ಆಗ ಅವರ ಮಾವ ಎಸ್.ಎಂ. ಕೃಷ್ಣ ಅವರು ಇನ್ನೂ ಕರವರ ನಾಡಿನ ಮುಖ್ಯಮಂತ್ರಿ ಆಗಿರಲಿಲ್ಲ. ಸಿದ್ಧಾರ್ಥ್ ನನ್ನ ಹಳೆಯ ಗೆಳೆಯನೆಂಬಂತೆ ತುಂಬಾ ಹೊತ್ತು ಖುಷಿ-ಖುಷಿಯಾಗಿ ಮಾತಾಡುತ್ತಿದ್ದರು. ಅವರು ಕಾಫಿ ಡೇಯನ್ನು ಪ್ರಪಂಚದ ಶ್ರೇಷ್ಠ ಕಾಫಿ ಅಂಗಡಿಗಳ ಸರಪಳಿ(Chain of Restourants) ಮಾಡುವುದಾಗಿ ಹೇಳುತ್ತಿದ್ದರು. ತಾವು ಅಂದು ಕಂಡಿದ್ದ ಕನಸುಗಳ ನನಸು ಮಾಡುತ್ತಲೇ ಸಾಗಿದರು.


ಅವರ ಪರಿಚಯವಾದ ಮೇಲೆ ನಾವು ತುಂಬಾ ಸಾರಿ ಬೇರೆ-ಬೇರೆ ಕಡೆ ಭೇಟಿಯಾಗುತ್ತಲೇ ಇದ್ದೆವು. ಅವರೊಂದು ಸಾರಿ ಅವರ ಸ್ವಂತ ಊರಾದ ಚೇತನಹಳ್ಳಿಯಲ್ಲಿ ಒಂದು ಭವ್ಯವಾದ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಆಗ ನಾನು ಹಾಸನದಲ್ಲಿ ಎಸ್​ಪಿ ಆಗಿದ್ದೆ. ಆಗ ಸನ್ಮಾನ್ಯ ಎಸ್.ಎಂ. ಕೃಷ್ಣ ಅವರು ಕರವರ ನಾಡಿನ ಮುಖ್ಯಮಂತ್ರಿಗಳಾಗಿದ್ದರು.


ಸಿದ್ಧಾರ್ಥ ಅವರು ಉತ್ತಮ ರೀತಿಯಲ್ಲಿ ತಮ್ಮ ಎಲ್ಲಾ ಅತಿಥಿಗಳನ್ನೂ ಸತ್ಕರಿಸುತ್ತಿದ್ದರು. ನನಗೆ ತಮ್ಮ ಹಳೆಯ ಭವ್ಯವಾದ ಬ್ರಿಟಿಶ್ ಕಾಲದ ಮನೆಯನ್ನು ಸುತ್ತಾಡಿಸಿ ತೋರಿಸಿದರು. ಬ್ರಿಟಿಷರ ಕಾಫಿ ತೋಟ ಸ್ವಾತಂತ್ರ್ಯ ನಂತರ ತಮ್ಮ ಮನೆತನದ ಒಡೆತನಕ್ಕೆ ಹೇಗೆ ಬಂತು ಎಂದು ತಿಳಿಸಿದರು. ಅವರಲ್ಲಿ ಅದಮ್ಯ ಸಾಹಸ ಮನೋಭಾವವಿತ್ತು. ಅವರ ಕಂಡಾಗಲೆಲ್ಲಾ ನಾನು ಇವರಂತೆ ಆಗಬೇಕು, ನಾನೂ ತುಂಬಾ Active- ಚೇತನ ಶೀಲನಾಗಿರಬೇಕು ಎಂದುಕೊಳ್ಳುತ್ತಿದ್ದೆ.


ಅಂತಹ ವ್ಯಕ್ತಿ, ನನ್ನ ಭಾಷಣಗಳ-ಬರಹಗಳ ಅಭಿಮಾನಿಗಳಾಗಿದ್ದರು. ಅವರ ತಂದೆ ನಾನು ಒಂದು ಸಾರಿ ಪೂರ್ಣಪ್ರಜ್ನ ಶಾಲೆಯ ಸಮಾರಂಭದಲ್ಲಿ ಭಾಗವಹಿಸಿದ್ದೆವು. ನನ್ನ ಭಾಷಣ ಮುಗಿದ ಮೇಲೆ ಅವರ ತಂದೆ ಹೇಳಿದ ಮಾತು, "ನಿಮ್ಮ ಮಾತು ಕೇಳಿದ್ರೆ ನಾನು ಒಮ್ಮೆ ಹಿಂದೆ ದ.ರಾ. ಬೇಂದ್ರೆ ಅವರ ಭಾಷಣ ಕೇಳಿದ್ದೆ, ಅವರಂತೆ ನೀವು ಮಾತಾಡ್ತೀರಿ. ನಮ್ಮ ಸಿದ್ಧಾರ್ಥ ನಿಮ್ಮ ಭಾಷಣಗಳ ಅಭಿಮಾನಿ" ಎಂದಿದ್ದರು. "ಆತ ನಾನು ನಿಮ್ಮೊಡನೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಅಂದಿದ್ದಕ್ಕೆ, ನಿಮಗೆ ಒಳ್ಳೆಯ ಭಾಷಣ, ಒಳ್ಳೆಯ ಮಾತುಗಾರರ ಕೇಳುವ ಭಾಗ್ಯ ಇವತ್ತು ಸಿಗುತ್ತದೆ" ಎಂದು ಹೇಳಿದ ಎಂದಿದ್ದರು.


ಸಿದ್ಧಾರ್ಥ ನಿಜವಾಗಿಯೂ ಬುದ್ಧನಾಗುವ ಮೊದಲು ಆ ಸಿದ್ಧಾರ್ಥನಂತೆ ಮಾನವೀಯತೆ-ರಾಜಕಳೆಯಿಂದ ಬದುಕಿದ. ಇಂದು ಕಳೆಬರವಗಿದ್ದಾನೆ. ಈ ಸಿದ್ಧಾರ್ಥನೂ ಬುದ್ಧನಾಗಲು ಹೊರಟಿದ್ದ. ಆತನಲ್ಲಿ ಈ ಪ್ರಪಂಚದ ಸಾವಿರಾರು ಸತ್ಯಗಳು ಉಳಿದು ಬಿಟ್ಟಿದ್ದವು. ಆತನೂ ಸಹ ಆ ಸತ್ಯಗಳನ್ನು ಈ ಪ್ರಪಂಚಕ್ಕೆ ತಿಳಿಸಲು ಹಪಹಪಿಸುತ್ತಿದ್ದ. ತನ್ನ ಅರಿವೆಗೆ ಬಂದ ಸತ್ಯಗಳ ತಿಳಿಸುವ ಮೊದಲೇ, ಬುದ್ಧನಾಗುವ ಮೊದಲೇ ನಡೆದು ಬಿಟ್ಟ. 


ಆತನ ಮನದೊಳಗಿದ್ದ ಆ ಸತ್ಯಗಳೆಲ್ಲಾ ಹೊರಕ್ಕೆ ಬರಬೇಕು, ಆತನ ಈ ಅಕಾಲಿಕ ಸಾವಿಗೆ ಕಾರಣಗಳ ಕಂಡು ಹಿಡಿಯಲೇ ಬೇಕು. ಯಾವ ವ್ಯಕ್ತಿಗಳಿಂದ, ಸಂಘಗಳಿಂದ, ಸಂಸ್ಥೆಗಳಿಂದ, ಇಲಾಖೆಗಳಿಂದ ಆತ ನೊಂದಿದ್ದ, ಆತ ಈ ನಿರ್ಧಾರ ತಳೆದಿದ್ದ ಎಂಬ ಸತ್ಯ ಹೊರ ಬರಬೇಕಾಗಿದೆ.


ನಮ್ಮ ಕಾಫಿ ಡೇ ಸಿದ್ಧಾರ್ಧ ಬುದ್ಧನಾಗಲೇ ಹೊರಟವನು. ತನ್ನ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡವನು. ಸಾಹಸಿ, ಆಟ ಈಗಾದ ಎಂದರ ಆತನನ್ನು ನಂಬಿದ್ದವಂಗೆ, ಆತನನ್ನು ಆದರ್ಶವಾಗಿ ಕಂಡವಂಗೆ ನೋವಾಗಿದೆ. ಸಂಪೂರ್ಣ ತನಿಖೆ ಆಗಲಿ. ಸತ್ಯ ಹೊರ ಬರಲಿ. "ಸಿದ್ಧಾರ್ಥ ಬುದ್ಧನಾಗಲು ಹೋದ. ಆಟ ನನಗೆ ಎಂದೆಂದಿಗೂ ಬುದ್ಧನೆ" ಎಂದು ಬರೆದಿದ್ದಾರೆ.