ಬೆಂಗಳೂರು: ಮುಂಬೈನಲ್ಲಿರುವ ನನ್ನ ಗೆಳೆಯರು ಅತೃಪ್ತರಲ್ಲ; ಅವರು ತೃಪ್ತರು, ಸಂತೃಪ್ತರು ಎಂದು ಸಚಿವ ಡಿ.ಕೆ. ಶಿವಕುಮಾರ್ ಸದನದಲ್ಲಿ ಬಂಡಾಯ ಶಾಸಕರನ್ನು ವ್ಯಂಗ್ಯ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಸದನದಲ್ಲಿಂದು ಮಾತನಾಡುತ್ತಾ ಮಂಕುತಿಮ್ಮನ ಕಗ್ಗ, ಮಲ್ಲಿಗೆ ಮಾತು ಉಲ್ಲೇಖಿಸಿ ಕಾವ್ಯಾತ್ಮಕವಾಗಿ ಬಿಜೆಪಿಯನ್ನು ಕುಟುಕಿದ ಡಿ.ಕೆ. ಶಿವಕುಮಾರ್,  ನನ್ನ ಬಾಂಬೆ ಮಿತ್ರರಾದ ಸಂತೃಪ್ತ ಸ್ನೇಹಿತರಿಗೆ ಹೇಳುತ್ತಿದ್ದೇನೆ, ನಿಮ್ಮನ್ನು ಯಾರು ಮಂತ್ರಿ ಮಾಡುವುದಿಲ್ಲ ಎಂದು ಹೇಳಿದರು. 


ಈ ಸಂದರ್ಭದಲ್ಲಿ ತಮ್ಮ ಮುಂಬೈ ಭೇಟಿಯ ಬಗ್ಗೆ ಮಾತನಾಡಿದ ಡಿಕೆಶಿ, ಮುಂಬೈ ಆತಿಥ್ಯಕ್ಕೆ ಬಹಳ ಹೆಸರುವಾಸಿ. ಆದರೆ, ನಮಗೆ ಕಹಿ ಅನುಭವವಾಯ್ತು. ನನಗೆ ಹೊಟ್ಟೆ ಉರಿತಿದೆ ಅಧ್ಯಕ್ಷರೆ, ನಾನು ಬಾಂಬೆಗೆ ಹೋಗಬೇಕಾದರೆ ಅಲ್ಲಿ ಇದ್ದಂತ ಇಬ್ಬರು ಸದಸ್ಯರು ನನ್ನ ಕರೀರಿ ಅಣ್ಣ ಎಂದರು. ಅದಕ್ಕೆ ನಾನು ಅಧಿಕೃತವಾಗಿ ಪ್ರವಾಸ ಆಯೋಜಿಸಿದೆ. ರಾಜಕೀಯದಲ್ಲಿ ಎಲ್ಲವೂ ಸಾಧ್ಯತೆಯ ಕಲೆ. ಯಾರು ಎಲ್ಲಿಗೆ ಬೇಕಾದರೂ ಏಳಬಹುದು. ಅದೇನೋ ಅಂತಾರಲ್ಲ ಆಯಾರಾಂ ಗಯಾರಾಂ ಆ ತರ ಆಗಿದೆ ಎಂದರು.


ಯಡಿಯೂರಪ್ಪನವರು ವಿಪ್ ನಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ ಅವರು ಮಾದರಿಯಾಗಬೇಕಾಗಿತ್ತು. ಆದರೆ ಅವರೇ ಈಗ ರೀತಿ ಮಾತನಾಡುತ್ತಿದ್ದಾರೆ. ಇದು ನಿಜ್ಜಕ್ಕೂ ಅಸಹ್ಯ ಎನಿಸುತ್ತದೆ. ಅವತ್ತು ಎಂಟಿಬಿ ನಾಗರಾಜ್ ಅವರಿಗೆ ಟೆಕೆಟ್ ನೀಡಿದ್ದೇನೆ. ಅವರನ್ನು ಬೀಗ ಹಾಕಬೇಕಂದರೆ ಯಾವಾಗಲೂ ಹಾಕಬಹುದಿತ್ತು. ಆದರೆ ನಂಬಿಕೆ ಆಧಾರದ ಮೇಲೆ ಹಾಗೆ ಬಿಟ್ಟಿದೇವೆ ಎಂದು  ಸಚಿವ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.


ನಾನು ಡಕಾಯಿತನಾ? ರಾಜ್ಯದ ಮಂತ್ರಿ, ಆದರೆ ನನಗೆ ಹೋಟೆಲ್​ಗೆ ಪ್ರವೇಶ ಕೊಟ್ಟಿಲ್ಲ. ಎಂಟಿಬಿ ನಾಗರಾಜ್ ಅವರನ್ನು ಕೂಡಿಹಾಕಿದ್ದೆನಾ? ನನ್ನ ಮನೆಗೆ ಬಂದಾಗ ಕೂಡಿಹಾಕಬಹುದಿತ್ತಲ್ಲ? ಎಂಟಿಬಿಗೆ ಟಿಕೆಟ್ ಕೊಡಲು ನಾನು ಕಾರಣ ಎಂದು ಹೇಳಿದರು.


ನನ್ನನ್ನು ಜೈಲಿಗೆ ಹಾಕುವುದಕ್ಕೆ ತಂತ್ರ ನಡೆಯುತ್ತಿದೆ. ನನ್ನನ್ನು ರಕ್ಷಿಸಿ ಅಧ್ಯಕ್ಷರೆ, ಬಿಜೆಪಿಯವರು ಇದಕ್ಕಾಗಿ ಪ್ಲಾನ್ ಮಾಡುತ್ತಿದ್ದಾರೆ. ಈ ಹಿಂದೆ ಶಾಂತಾ ಜೈಲಿಗೆ ಡಿಕೆಶಿ ಜೈಲಿಗೆ ಎಂದು ಶ್ರೀರಾಮಲು ಹೇಳಿದ್ದಾರೆ. ನನ್ನ ಹಣೆ ಬರಹದಲ್ಲಿ ಏನು ಇರುತ್ತದೆ ಅದು ಆಗುತ್ತದೆ.  ನಾನು ಜೈಲಿಗೆ ಹೋಗಬೇಕೆಂದರೆ ನಾನು ಜೈಲಿಗೆ ಹೋಗುತ್ತೇನೆ. 


ನನಗೆ ಯಾರ ಮೇಲೆ ದ್ವೇಷವಿಲ್ಲ, ನಾನು ಯಾರನ್ನೂ ತೆಗಳುತ್ತಿಲ್ಲ. ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ನನಗೆ ಇದೆ. ರಾಜಕೀಯದಲ್ಲಿ ಎಲ್ಲ ರೀತಿಯ ಕುಸ್ತಿಯನ್ನು ಕಲಿತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.