ಬೆಂಗಳೂರು : ನನ್ನಲ್ಲಿ ಸಾಮಾಜಿಕ ನ್ಯಾಯದ ಬದ್ಧತೆ, ಹೋರಾಟದ ಕಿಚ್ಚು ಮತ್ತು ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸಿದ್ದು ಡಾ.ಅಂಬೇಡ್ಕರ್. ಬಾಬಾಸಾಹೇಬರು ರಚಿಸಿದ್ದ ಸಂವಿಧಾನ ಇಲ್ಲದೆ ಹೋಗಿದ್ದರೆ ನಾನು ಹಳ್ಳಿಯಲ್ಲಿ ದನ-ಕುರಿ ಮೇಯಿಸುತ್ತಾ ಉಳಿದುಬಿಡುತ್ತಿದ್ದೆನೋ ಏನೋ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನವಾದ ಇಂದು ಅಂಬೇಡ್ಕರ್ ಕುರಿತು ತಮ್ಮ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯದ ಬಗೆಗಿನ ನನ್ನ ಬದ್ಧತೆ ರಾಜಕೀಯ ಉದ್ದೇಶದ್ದಲ್ಲ, ಅದು ಬಾಬಾಸಾಹೇಬ್ ಅಂಬೇಡ್ಕರ್ ತೋರಿದ ದಾರಿ. ನಮ್ಮ ಸರ್ಕಾರವನ್ನು ದಲಿತಪರ, ಅಹಿಂದಪರ ಎಂದು ಟೀಕಿಸುತ್ತಿದ್ದ ಪಕ್ಷಗಳು ಕೂಡಾ ಅಂಬೇಡ್ಕರ್ ಗುಣಗಾನ ಮಾಡುತ್ತಿರುವುದು ಸ್ವಾಗತಾರ್ಹ.‌ ಅವರು ನಮ್ಮಂತೆ ನುಡಿದಂತೆ ನಡೆಯಬೇಕು ಎಂದು ಹೇಳಿದ್ದಾರೆ.



ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ, ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು  ಶೋಷಿತ ವರ್ಗಕ್ಕೆ ನೀಡಿದ ಯುಗಪುರುಷ. ಈ ಕಾರಣಕ್ಕಾಗಿಯೇ ಇಂದು ಜಗತ್ತು ಅಂಬೇಡ್ಕರ್ ಅವರಿಗೆ ತಲೆಬಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ,


ಡಾ.ಅಂಬೇಡ್ಕರ್ ರಚಿಸಿರುವ ಸಂವಿಧಾನದ ರಕ್ಷಣೆಗೆ ಎಲ್ಲರೂ ಪಣ ತೊಡೋಣ, ಅದೇ ರೀತಿ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಪಟ್ಟಭದ್ರ ಶಕ್ತಿಗಳ ವಿರುದ್ಧದ ಹೋರಾಟವನ್ನು ಜತೆಗೂಡಿ ಮಾಡೋಣ ಎಂದು ಸಿದ್ದರಾಮಯ್ಯ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.