ಎಲ್ಲರ ಮೈನವಿರೇಳಿಸುವ ಪಂಜಿನ ಕವಾಯತು
ಜಂಬೂ ಸವಾರಿ ಮೆರವಣಿಗೆಯ ನಂತರ ಬನ್ನಿಮಂಟಪ ಮೈದಾನದಲ್ಲಿ ಪಂಜಿನಕವಾಯತು ಕಾರ್ಯಕ್ರಮ ನಡೆಯಲಿದೆ.
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಎಂದರೆ 'ಜಂಬೂ ಸವಾರಿ' ಮತ್ತು ಪಂಜಿನ ಕವಾಯತು. ಈಗಾಗಲೇ ಜಂಬೂ ಸವಾರಿ ಮೈಸೂರು ಅರಮನೆಯಿಂದ ಬನ್ನಿಮಂಟಪದತ್ತ ತೆರಳುತ್ತಿದೆ. ಸಂಜೆ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕಾರ್ಯಕ್ರಮ ನಡೆಯಲಿದೆ.
ಆಕರ್ಷಕ ಪಂಜಿನ ಕವಾಯತು ದಸರಾ ಮಹೋತ್ಸವದ ಕೊನೆಯ ಕಾರ್ಯಕ್ರಮವಾಗಿದ್ದು, ಇದನ್ನು ವೀಕ್ಷಿಸಲು ಅಪಾರ ಪ್ರೇಕ್ಷಕರು ಆಗಮಿಸುತ್ತಾರೆ. ಪಂಜಿನ ಕವಾಯತಿಗೆ ಬನ್ನಿಮಂಟಪ ಮೈದಾನ ಮದುವಣಗಿತ್ತಿಯಂತೆ ಸಿದ್ಧವಾಗಿದ್ದು, ಹೂ, ಗಿಡಗಳಿಂದ ಅಲಂಕಾರವಾಗುತ್ತಿದ್ದು, ಕಾರ್ಯಕ್ರಮವನ್ನ ಕೂತು ನೋಡಲು ಸುಸಜ್ಜಿತ ಆಸನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕರ್ನಾಟಕ ಪೊಲೀಸ್ ಪಡೆಯ ತರಬೇತಿ ಪೊಲೀಸರು ಮೈದಾನದಲ್ಲಿ ಹೆಜ್ಜೆ ಹಾಕುತ್ತ ಪಂಜನ್ನು ಹಿಡಿದು ಬೆಳಕನ್ನು ಮೂಡಿಸುವ ದೃಶ್ಯ, ಅವರ ಶಿಸ್ತು ಬದ್ಧ ಪಥಸಂಚಲನ, ಬೈಕ್ ಮೇಲೆ ಮಾಡುವ ಸಾಹಸಗಳು ನೋಡುಗರನ್ನು ಎದೆ ಝಲ್ ಎನ್ನುವಂತೆ ಮಾಡುತ್ತದೆ. ದಸರಾ ಉತ್ಸವಗಳು ವಿಜಯದಶಿಮಿಯ ರಾತ್ರಿ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಯತು (ಟಾರ್ಚ್ಲೈಟ್ ಮೆರವಣಿಗೆ) ಸಮಾರಂಭದಲ್ಲಿ ಕೊನೆಗೊಳ್ಳುತ್ತದೆ.