ಮೈಸೂರು: ಮೈಸೂರು ಜಿಲ್ಲೆ ಕೊರೋನಾ ಮುಕ್ತವಾದ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ಪೂಜೆ ಸಲ್ಲಿಸಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ (ST Somashekhar)  ಜಿಲ್ಲೆಯ ಹಾಗೂ ರಾಜ್ಯದ ಜನತೆಯನ್ನು ಕಾಪಾಡು ಎಂದು ಕೋರಿಕೊಂಡರು. 


COMMERCIAL BREAK
SCROLL TO CONTINUE READING

ಬಳಿಕ ಮಾತನಾಡಿದ ಅವರು, ಮೈಸೂರು ಜಿಲ್ಲೆ ಕೊರೋನಾ ಮುಕ್ತವಾದರೆ ತಾಯಿ ಸನ್ನಿಧಿಗೆ ಬಂದು ಪೂಜೆ ಸಲ್ಲಿಸುವುದಾಗಿ ಕೋರಿಕೊಂಡಿದ್ದೆ. ಈಗ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಜಿಲ್ಲೆಯ ಜನತೆ ಕೊರೋನಾದಿಂದ ಪಾರಾಗಿದ್ದಾರೆ. 90 ಪಾಸಿಟಿವ್ ಪ್ರಕರಣದಿಂದ ಶೂನ್ಯಕ್ಕೆ ಇಳಿದಿದೆ. ಇನ್ನು ಮುಂದೆಯೂ ಆಶೀರ್ವಾದ ಹೀಗೆಯೇ ಇರಲಿ ಎಂದು ತಾಯಿ ಬಳಿ ಕೋರಿಕೊಂಡಿದ್ದೇ ಎಂದು ತಿಳಿಸಿದರು.


ಜಿಲ್ಲೆ ಜನತೆ, ಆಡಳಿತ ವರ್ಗ, ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ:
ಜನತೆಯ ಸಹಕಾರ ಉತ್ತಮವಾಗಿತ್ತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವೈದ್ಯರು, ನರ್ಸ್ ಗಳು, ಪೌರ ಕಾರ್ಮಿಕರ ಸೇವೆಯಿಂದ ಜಿಲ್ಲೆ ಕೊರೋನಾ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಪರವಾಗಿ ಇವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು. 


ಪರಿಸ್ಥಿತಿ ನೋಡಿ ದೇಗುಲ ತೆರೆಯಲು ಅವಕಾಶ:
ರಾಜ್ಯದಲ್ಲಿ ದೇವಸ್ಥಾನಗಳನ್ನು ತೆರೆಯಲು ಅನುಮತಿ ಸಿಕ್ಕಿಲ್ಲ. ಹಾಗಾಗಿ ನಾವೂ ಜನತೆಯಂತೆ ದೇಗುಲದ ಹೊರಗೆ ನಿಂತು ತಾಯಿಗೆ ಪೂಜೆ ಸಲ್ಲಿಸಿ ಮನವಿ ಮಾಡಿದ್ದೇವೆ. ರಾಜ್ಯಾದ್ಯಂತ ದೇಗುಲ ತೆರೆಯುವ ಬಗ್ಗೆ ಸಂಪುಟದಲ್ಲೂ ಚರ್ಚೆಯಾಗಿದೆ. ಆದರೆ, ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. 


ಎಪಿಎಂಸಿ ಕಾಯ್ದೆ ತಿದ್ದುಪಡಿ ಸಮರ್ಥನೆ :
ರೈತರಿಗೆ ದುಪ್ಪಟ್ಟು ಬೆಲೆ ಸಿಗಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದ ರೈತರಿಗೆ ಯಾವುದೇ ತರನಾದ ಅನ್ಯಾಯವಾಗುವುದಿಲ್ಲ. ನನ್ನ ಬೆಳೆ ನನ್ನ ಹಕ್ಕು ಎಂದು ರೈತ ಸ್ವಾಭಿಮಾನದಿಂದ ಹೇಳಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಎಲ್ಲಿ ಬೇಕಾದರೂ ರೈತ ಬೆಳೆ ಮಾರಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.


ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿ ವ್ಯವಸ್ಥೆಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಎಪಿಎಂಸಿ ಸರ್ಕಾರದ ಹಿಡಿತದಲ್ಲೇ ಇರಲಿದೆ. ರೈತರು ಬೆಳೆದ ಬೆಳೆಗೆ ದುಪ್ಪಟ್ಟು ಬೆಲೆ ಸಿಗುಬಂತಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಸಚಿವರು ಹೇಳಿದರು.


ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಜಿ.ಟಿ. ದೇವೇಗೌಡ, ಪಿ. ರಾಜೀವ್, ಪೊಲೀಸ್ ಆಯುಕ್ತಚಂದ್ರಗುಪ್ತ, ಉಪಸ್ಥಿತರಿದ್ದರು.