ಮಂಡ್ಯದಿಂದ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ಸೂಚನೆ
ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು ಮೈಸೂರು ಜಿಲ್ಲೆಯಲ್ಲೂ ಅನಗತ್ಯವಾಗಿ ಬರಬಾರದು ಎಂಬ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ.
ಮೈಸೂರು: ಮೈಸೂರು ಜಿಲ್ಲೆ ಪೂರ್ತಿ ನಿಯಂತ್ರಣದಲ್ಲಿದೆ. ಹಾಗಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೇನ್ (Quarantine) ಮಾಡಲಾಗುವುದು. ನೆರೆಯ ಮಂಡ್ಯದಿಂದ ಮೈಸೂರು ಭಾಗಕ್ಕೆ ಬರುವವರ ಮೇಲೆ ನಿಗಾ ವಹಿಸಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ತಿಳಿಸಿದರು.
ಚಾಮರಾಜ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವರು, ಮಂಡ್ಯದಿಂದ ಮೈಸೂರು ಭಾಗಕ್ಕೆ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಪೊಲೀಸರು ಮಫ್ತಿಯಲ್ಲೂ ಗಮನಹರಿಸುತ್ತಿದ್ದಾರೆ. ಮಂಡ್ಯ ಚೆಕ್ ಪೋಸ್ಟ್ ಅನ್ನು ಸದ್ಯ ತೆರವುಗೊಳಿಸದಿರುವಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ -19 (Covid-19) ಪ್ರಕರಣಗಳು ಹೆಚ್ಚಾಗಿದ್ದು ಮೈಸೂರು ಜಿಲ್ಲೆಯಲ್ಲೂ ಅನಗತ್ಯವಾಗಿ ಬರಬಾರದು ಎಂಬ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಅಲ್ಲಿಂದ ಬರುವವರನ್ನು ಪರೀಕ್ಷೆಗೊಳಪಡಿಸುವುದಲ್ಲದೆ, ಕ್ವಾರಂಟೇನ್ ನಲ್ಲಿಡಲಾಗುವುದು. ಅವರಿಗೆ ಸೋಂಕಿಲ್ಲವೆಂದಾದಲ್ಲಿ ಮಾತ್ರ ಬಿಡುಗಡೆಗೊಳಿಸುವಂತೆ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜ್ಯೂಬ್ಲಿಯೆಂಟ್ ಕಾರ್ಖಾನೆ ಪ್ರಾರಂಭವಾಗುತ್ತಿದೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ನೋಡಿ ತಿಳಿದಿದ್ದೇನೆ. ಆದರೆ ನನಗೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಗೃಹಮಂತ್ರಿ ಮೈಸೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಜೊತೆ ಚರ್ಚಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.
ಬಸ್, ರೈಲಿನಲ್ಲೂ ಸಾಮಾಜಿಕ ಅಂತರ:
ಬಸ್, ರೈಲು ಸಂಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ. ಪರೀಕ್ಷೆಗೊಳಪಟ್ಟವರು ಮಾತ್ರ ಈಗ ಹೆಚ್ವಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಅಲ್ಲೂ ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಮದುವೆಗಳಿಗೆ 50 ಜನ ಮಾತ್ರ:
ಮದುವೆ ಸಮಾರಂಭಗಳಿಗೆ ಸರ್ಕಾರದಿಂದ 50 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ನಂಜನಗೂಡಿನಲ್ಲಿ ನಡೆದ ವಿವಾಹ ಸಮಾರಂಭದ ಮಾಹಿತಿ ಪಡೆದಿದ್ದೇನೆ. ಅಲ್ಲಿ 60 ಜನ ಮಾತ್ರ ಭಾಗವಹಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಭಾನುವಾರ ಮದುವೆಗಳು ಮೊದಲೇ ನಿಗದಿಯಾಗಿದ್ದರೆ ನೆರವೇರಿಸಿಕೊಳ್ಳಲಿ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.