ಮೈಸೂರು ಅರಮನೆ ಸ್ವರ್ಣಲೇಪನ ವಿಚಾರ ಸರ್ಕಾರಕ್ಕೆ ಬಿಟ್ಟ ವಿಷಯ- ಹೈಕೋರ್ಟ್
ಮೈಸೂರು: ಸ್ಥಗಿತಗೊಂಡಿರುವ ಮೈಸೂರು ಅರಮನೆ ದರ್ಬಾರ್ ಹಾಲ್‌ನ ಸ್ವರ್ಣಲೇಪನ ಕಾರ್ಯವನ್ನು ಗಂಜೀಫಾ ಕಲಾವಿದ ರಘುಪತಿ ಭಟ್ ಅವರಿಂದಲೇ ಮುಂದುವರಿಸಬೇಕೆಂಬ ಕೋರಿಕೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಲು ಹೈಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.
ಈ ಕುರಿತಂತೆ ಮೈಸೂರಿನ ಕುವೆಂಪು ನಗರದ ಕೆ.ಬಸವರಾಜೇ ಅರಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಲೇವಾರಿ ಮಾಡಿದೆ.
ದರ್ಬಾರ್ ಹಾಲ್ ಮತ್ತು ಅಲ್ಲಿರುವ ಕಂಬಗಳಿಗೆ ಸ್ವರ್ಣಲೇಪನ ಮಾಡಲು ಖ್ಯಾತ ಗಂಜೀಫಾ ಕಲಾವಿದ ರಘುಪತಿ ಭಟ್ ಗುತ್ತಿಗೆ ಪಡೆದಿದ್ದರು. ಪ್ರಥಮ ಹಂತದಲ್ಲಿ 70 ಕಂಬಗಳಿಗೆ ಸ್ವರ್ಣಲೇಪನ ಮಾಡಿದ್ದರು. ಏತನ್ಮಧ್ಯೆ ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಜೀವರಾಜು ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ಎರಡನೇ ಹಂತದ ಕಾಮಗಾರಿಗೆ ಹಣ ಬಿಡುಗಡೆಯಾಗಿತ್ತು. ಇದರ ಅನುಸಾರ ಸ್ವರ್ಣಲೇಪನ ನಡೆಸುವಂತೆ ಜಿಲ್ಲಾಡಳಿತ ಕೋರಿದ ಮನವಿಯನ್ನು ರಘುಪತಿ ಭಟ್ ತಿರಸ್ಕರಿಸಿದ್ದರು.