ಮೈಸೂರು: ಮೈಸೂರು ವಿವಿ ಸ್ನಾತ್ತಕೋತ್ತರ ವಿಭಾಗದ ವಸಂತ್ ಕಲಾಲ್ ಎನ್ನುವ ವಿದ್ಯಾರ್ಥಿಗೆ ಹಾಜರಾತಿ  ಕೊರತೆಯ ಕಾರಣ ಒಡ್ಡಿ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದೆ.


COMMERCIAL BREAK
SCROLL TO CONTINUE READING

ಈ ವಿದ್ಯಾರ್ಥಿಯು ವಿವಿಯ ಗಾಂಧಿ ಅಧ್ಯಯನ ಸಂಸ್ಥೆಯಲ್ಲಿ ಸ್ನಾತ್ತಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದು, ಶೇಕಡಾ 75 ರಷ್ಟು ಹಾಜರಾತಿಯನ್ನು ಹೊಂದಿಲ್ಲ ಎನ್ನುವ ಕಾರಣದಿಂದಾಗಿ ಈ ವಿದ್ಯಾರ್ಥಿಗೆ ಅಂತಿಮ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಆದ್ದರಿಂದ ಈಗ ವಿದ್ಯಾರ್ಥಿಯು ವಿವಿಯ ಕ್ರಮವನ್ನು ಖಂಡಿಸಿ  ಮಾನಸ ಗಂಗೋತ್ರಿಯ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ.



ಮೈಸೂರು ವಿವಿ ಕ್ರಮದ ಕುರಿತಾಗಿ ಪ್ರತಿಕ್ರಿಯಿಸಿರುವ ವಸಂತ ಕಲಾಲ್ "ಶೇ 75 ರಷ್ಟು ಹಾಜರಾತಿ ಕಡ್ಡಾಯ ಎಂಬ ನಿಯಮವಿಲ್ಲ, ಇದ್ದರೂ ಅದು ಕೇವಲ ಪದವಿಗೆ ಮಾತ್ರ ಸೀಮಿತವಾಗಿದೆ. ಇದು ಸ್ನಾತ್ತಕೋತ್ತರ ಪದವಿಗಳಿಗೆ ಅನ್ವಯವಾಗುವುದಿಲ್ಲ ಎಂದರು. ಪದವಿಗೆ ಇರುವ 75 ರಷ್ಟು ಕಡ್ಡಾಯ ಹಾಜರಾತಿ ನಿಯಮವನ್ನು ಪಿಜಿಗೂ ವಿಸ್ತರಿಸುವ ಮೂಲಕ ನನಗೆ ಅನ್ಯಾಯವೆಸಗಲಾಗಿದೆ ಆದ್ದರಿಂದ ನನಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು " ಎಂದು ವಿವಿಯನ್ನು ಆಗ್ರಹಿಸಿದ್ದಾರೆ.


ಇತ್ತೀಚಿಗೆ ದೆಹಲಿಯ ಪ್ರತಿಷ್ಟಿತ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ  ವಿವಿ ಆಡಳಿತವು ಕೂಡ ಶೇ 75 ರಷ್ಟು ಹಾಜರಾತಿಯನ್ನು ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿತ್ತು. ಆದರೆ ಇದಕ್ಕೆ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ವರ್ಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ವಿವಿ ವಿದ್ಯಾರ್ಥಿಗಳು ಮುಂದುವರೆದು ಮಾರ್ಚ್ 8 ರಂದು ವೋಟ್ ಮೂಲಕ ಈ ವಿಷಯವಾಗಿ ಅಭಿಪ್ರಾಯ ಸಂಗ್ರಹಿಸಿದ್ದರು. ಆಗ ಒಟ್ಟು 4,456 ವಿದ್ಯಾರ್ಥಿಗಳಲ್ಲಿ 4,388 (98.7%) ಹಾಜರಾತಿ ಕಡ್ದಾಯಗೊಳಿಸುವುದನ್ನು ವಿರೋಧಿಸಿದ್ದರೆ, ಕೇವಲ 41 (0.92%) ವಿದ್ಯಾರ್ಥಿಗಳು ಹಾಜರಾತಿ ಕಡ್ದಾಯಗೊಳಿಸುವುದರ ಪರವಾಗಿದ್ದರು ಎನ್ನುವುದನ್ನು ನಾವು ಗಮನಿಸಬಹುದು.