ಹತ್ತೇ ನಿಮಿಷದಲ್ಲಿ ಕಲ್ಲು, ಪೆಟ್ರೋಲ್ ಬಾಂಬ್ ಗಳು ಎಲ್ಲಿಂದ ಬಂದವು? ಇದೊಂದು ದೊಡ್ಡ ಪಿತೂರಿ: ಎಚ್ಡಿಕೆ
Nagamangala Riot: ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ ನಾಗಮಂಗಲ ಘಟನೆ ನಡೆದಿದೆ; ಹತ್ತೇ ನಿಮಿಷದಲ್ಲಿ ಕಲ್ಲು, ಪೆಟ್ರೋಲ್ ಬಾಂಬ್ ಗಳು ಎಲ್ಲಿಂದ ಬಂದವು? ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಾಗಮಂಗಲ (ಮಂಡ್ಯ): ಗಣೇಶ ಮೆರವಣಿಗೆ ವೇಳೆ ಪಟ್ಟಣದಲ್ಲಿ ನಡೆದ ಗಲಭೆ ಪೂರ್ವಯೋಜಿತ ಕೃತ್ಯ, ವ್ಯವಸ್ಥಿತ ಪಿತೂರಿ. ಅಷ್ಟೇ ಅಲ್ಲ; ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ನಾಗಮಂಗಲದ ಗಲಭೆ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಅಂಗಡಿ, ಮಳಿಗೆಗಳನ್ನು ವೀಕ್ಷಿಸಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ವ್ಯವಸ್ಥಿತವಾಗಿ ಗಲಭೆಗಳನ್ನು ಸೃಷ್ಟಿ ಮಾಡುವುದು ಕಾಂಗ್ರೆಸ್ ಗೆ ಕರತಲಾಮಲಕ. ಹಿಂದಿನಿಂದಲೂ ಅದನ್ನು ಮಾಡಿಕೊಂಡು ಬಂದಿದೆ. 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಮನಗರ, ಚನ್ನಪ್ಪಟ್ಟಣದಲ್ಲಿ ಕೋಮುಗಲಭೆ ಸೃಷ್ಟಿಸಿ ಬೆಂಕಿ ಹಾಕಲಾಯಿತು. ಅವಳಿ ಪಟ್ಟಣಗಳು ಹೊತ್ತಿ ಉರಿದವು. ಅದೇ ಮಾದರಿಯಲ್ಲಿ ನಾಗಮಂಗಲದಲ್ಲಿ ಗಲಭೆ ಎಬ್ಬಿಸಲಾಗಿದೆ. ಡಿಜಿ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಸುಟ್ಟು ಹಾಕಲಾಯಿತು. ಅದಕ್ಕೂ ಕಾಂಗ್ರೆಸ್ ನಾಯಕರೇ ಕಾರಣ. ಆ ಪ್ರಕರಣದಲ್ಲಿ ಜೈಲಿಗೆ ಹೋದವರು ಏನಾಗಿದ್ದಾರೋ ಗೊತ್ತಿಲ್ಲ. ನಾಗಮಂಗಲದಲ್ಲಿ ಈಗ ಯಾವ ದುರುದ್ದೇಶ ಇಟ್ಟುಕೊಂಡು ಗಲಭೆ ಸೃಷ್ಟಿ ಮಾಡಲಾಗಿದೆಯೋ ಗೊತ್ತಿಲ್ಲ ಎಂದು ಕೇಂದ್ರ ಸಚಿವರು ಅನುಮಾನ ವ್ಯಕ್ತಪಡಿಸಿದರು.
ಇಂಥ ಗಲಾಟೆಗಳನ್ನು ಮಾಡಿಸುವುದರಲ್ಲಿ ಕಾಂಗ್ರೆಸ್ ಎಕ್ಸ್ ಪರ್ಟ್. ನಾಗಮಂಗಲದಲ್ಲಿಯೂ ಕಾಂಗ್ರೆಸ್ ಚಿತಾವಣೆಯ ಬಗ್ಗೆ ಅನುಮಾನ ಇದೆ. ಈಗ ಚನ್ನಪಟ್ಟಣದಲ್ಲಿ ಉಪ ಚುನಾವಣೆ ಬರುತ್ತಿದೆ. ಬೇರೆ ಬೇರೆ ಘಟನೆಗಳು ಕೂಡ ನಡೆಯುತ್ತಿವೆ. ಹೀಗಾಗಿ ಒಂದು ಸಮುದಾಯದ ಓಲೈಕೆ ಮಾಡಲು ಈ ಸಂಚು ರೂಪಿಸಿರಬಹುದು. ಇಡೀ ಘಟನೆಯನ್ನು ನೋಡಿದರೆ ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್ ಇರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಈ ಘಟನೆಗೆ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಹಾಗೂ ಸ್ಥಳೀಯ ಪೊಲೀಸರ ಕರ್ತವ್ಯ ಲೋಪವೂ ಕಾರಣ ಎಂದು ದೂರಿದ ಅವರು; ಪೊಲೀಸರು ನಿಜವಾದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆಯಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವರು ಆಗ್ರಹಪಡಿಸಿದರು.
ಅಧಿಕಾರಿಗಳ ನಡೆ ಸಂಶಯಾಸ್ಪದ:
ಗಲಭೆಯ ಎಫ್‌ಐಆರ್ ಪ್ರತಿಯನ್ನು ಹಿಡಿದು ಮಾತನಾಡಿದ ಸಚಿವರು; ಆರೋಪ ಪಟ್ಟಿ ಸಂಪೂರ್ಣ ಲೋಪದಿಂದ ಕೂಡಿದೆ. ಪೊಲೀಸರ ವರ್ತನೆ ಸಂಶಯಾಸ್ಪದವಾಗಿದೆ ಎಂದು ಹೇಳಿದರು.
ಇದನ್ನೂ ಓದಿ- ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಿ ಶಾಲೆಗಳ ಚಿತ್ರಣವೇ ಬದಲಾಗುತ್ತದೆ-ಸಚಿವ ಮಧು ಬಂಗಾರಪ್ಪ
ಕೇವಲ 100-150 ಜನ ಇದ್ದ ಮೆರವಣಿಗೆಗೆ ಸ್ಥಳೀಯ ಪೊಲೀಸರಿಗೆ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ. ಸ್ಥಳದಲ್ಲಿ ಗಲಾಟೆ ಆರಂಭವಾಗುವುದಕ್ಕೆ ಕೇವಲ ಹತ್ತು ನಿಮಿಷಗಳ ಮೊದಲು ಮೀಸಲು ಪೊಲೀಸ್ ಪಡೆಯನ್ನು ಬೇರೆಡೆಗೆ ಕಳಿಸಲಾಗಿದೆ. ಅಲ್ಲದೆ; ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್ಪಿ ಸ್ಥಳದಲ್ಲಿಯೇ ಇರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಹಾಗಾದರೆ, ಈ ಇಬ್ಬರು ಅಧಿಕಾರಿಗಳು ಎಲಿದ್ದರು? ಮೀಸಲು ಪಡೆಯನ್ನು ಬೇರೆಡೆಗೆ ಕಳಿಸಿದ್ದು ಯಾಕೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಹತ್ತೇ ನಿಮಿಷದಲ್ಲಿ ಕಲ್ಲು, ಪೆಟ್ರೋಲ್ ಬಾಂಬ್ ಗಳು ಎಲ್ಲಿಂದ ಬಂದವು?
ಮೆರವಣಿಗೆ ಹೊರಟಿದ್ದವರ ಮೇಲೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲಾಗಿದೆ. ಕೇವಲ ಹತ್ತು ನಿಮಿಷದಲ್ಲಿ ಅಷ್ಟು ಪ್ರಮಾಣದ ಕಲ್ಲು, ಚಪ್ಪಲಿ, ಕಬ್ಬಿಣದ ಪೈಪ್ ಗಳು, ಪೆಟ್ರೋಲ್ ಬಾಂಬ್ ಗಳು ಎಲ್ಲಿಂದ ಬಂದವು? ಹತ್ತೇ ನಿಮಿಷದಲ್ಲಿ ಇವನ್ನೆಲ್ಲಾ ಸಂಗ್ರಹ ಮಾಡಿಕೊಳ್ಳಲು ಸಾಧ್ಯವೇ? ಇಡೀ ಗಲಭೆಯ ರೀತಿಯನ್ನು ನೋಡಿದರೆ ಹಿಂದೆ ದೊಡ್ಡ ಪಿತೂರಿ ಅಡಗಿರುವಂತೆ ತೋರುತ್ತದೆ ಎಂದು ಕೇಂದ್ರ ಸಚಿವರು ಅನುಮಾನ ವ್ಯಕ್ತಪಡಿಸಿದರು.
ಗೃಹ ಸಚಿವರ ವಿರುದ್ಧ ಕಿಡಿ:
ನಾಗಮಂಗಲ ಗಲಭೆಯನ್ನು ಸಣ್ಣ, ಆಕಸ್ಮಿಕ ಘಟನೆ ಎಂದು ಕರೆದಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವರು; ಇಷ್ಟೊಂದು ದೊಡ್ಡ ಗಲಭೆ ಆಗಿದೆ. ಯೋಜಿತವಾಗಿ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೂ ಇವರೂ ಸಣ್ಣ, ಆಕಸ್ಮಿಕ ಘಟನೆ ಎನ್ನುತ್ತಾರೆ, ಇವರನ್ನು ಗೃಹ ಸಚಿವರು ಎಂದು ಕರೆಯಬೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ತಮ್ಮ ನಡವಳಿಕೆಯನ್ನು ಸರಿ ಮಾಡಿಕೊಳ್ಳಬೇಕು. ಹಳೆ ಮೈಸೂರು ಭಾಗದಲ್ಲಿ ಎರಡೂ ಸಮುದಾಯದ ಜನರು ಸೌಹಾರ್ದತೆಯಿಂದ ಜೀವನ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಜನರ ಬದುಕು ಛಿದ್ರ ಮಾಡಬೇಡಿ. ಇದು ಸಣ್ಣ ವಿಷಯ. ಇದಕ್ಕೆ ಮಹತ್ವ ಕೊಡುವುದು ಬೇಡ ಎನ್ನುತ್ತಾರೆ ಗೃಹ ಸಚಿವರು. ಈ ರೀತಿ ಹೇಳಿಕೆ ಮೂಲಕ ಜನರಿಗೆ ಯಾವ ಸಂದೇಶ ಕೊಡುತ್ತಾರೆ ಅವರು? ಮೆರವಣಿಗೆಗೆ ಅನುಮತಿ ಕೊಟ್ಟಿರುವುದೇ ನೀವು. ಮೆರವಣಿಗೆಗೆ ಭದ್ರತೆ ಕೊಡಬೇಕಾದ ಹೊಣೆಯೂ ನಿಮ್ಮದೇ. ಘಟನೆ ಸ್ಥಳದಲ್ಲಿ ಆಗ ಎಷ್ಟು ಜನ ಪೊಲೀಸರನ್ನು ನಿಯೋಜನೆ ಮಾಡಿದ್ದಿರಿ? ನಿಮ್ಮ ಇನಸ್ಪೆಕ್ಟರ್ ಎಲ್ಲಿ ಇದ್ದರು. ಘಟನೆಗೂ ಮುನ್ನ ಇಲ್ಲಿದ್ದ ಮೀಸಲುಪಡೆ ವಾಹನವನ್ನು ವಾಪಸ್ ಕರೆಸಿಕೊಂಡಿದ್ದಾರೆ. ಘಟನೆ ನಡೆದ ಒಂದು ಗಂಟೆಗೆ ವಿಷಯ ಮಾಧ್ಯಮದವರಿಗೆ ಗೊತ್ತಾಗುತ್ತದೆ. ಪೊಲೀಸರಿಗೆ ಯಾಕೆ ಗೊತ್ತಾಗಿಲ್ಲ? ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಒತ್ತಾಯ ಮಾಡಿದರು.
ಇದನ್ನೂ ಓದಿ- ಮುಡಾ ಹಗರಣದಂತೆ ಬಿಡಿಎ ಹಗರಣ ಕೂಡ ನಿಮ್ಮ ಕೊರಳಿಗೆ ಸುತ್ತಿಕೊಳ್ಳಲಿದೆ: ಸಿಎಂ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ
ಅಧಿಕಾರಿ ಅಮಾನತು ಕಣ್ಣೊರೆಸುವ ತಂತ್ರ:
ನಾನು ನಾಗಮಂಗಲಕ್ಕೆ ಬರುತ್ತೇನೆ ಎಂದು ಗುರುವಾರವೇ ಹೇಳಿದ್ದೆ. ಅಂದು ಸಂಜೆ ಬಿಜೆಪಿ ನಾಯಕರು ಸ್ಥಳಕ್ಕೆ ಬಂದಿದ್ದರು. ಅದಕ್ಕಾಗಿಯೇ ಇನ್ಸ್ಪೆಕ್ಟರ್ ಅಶೋಕ್ ರನ್ನು ಸಸ್ಪೆಂಡ್ ಮಾಡಿದ್ದಾರೆ. ಇದು ಕಣ್ಣೊರೆಸುವ ತಂತ್ರ ಎಂದ ಸಚಿವರು; ಮಸೀದಿ ಬಳಿ 10 ನಿಮಿಷ ಡಾನ್ಸ್ ಮಾಡಲು ಬಿಟ್ಟವರು ಯಾರು? ಆಗ ಪೊಲೀಸರು ಏನು ಮಾಡುತಿದ್ದರು? ಹೆಚ್ಚುವರಿ ಪೊಲೀಸರು ಇದ್ದರೆ ಪರಿಸ್ಥಿತಿ ನಿಯಂತ್ರಣ ಮಾಡಬಹುದಿತ್ತು. ಮೆರವಣಿಗೆ ವೇಳೆ ಇನಸ್ಪೆಕ್ಟರ್, ಡಿವೈಎಸ್ಪಿ ಯಾರೂ ಇರಲಿಲ್ಲ.
ಆದರೆ ಎಫ್‌ಐಆರ್‌ನಲ್ಲಿ ಅವರು ಇದ್ದರು ಎಂದು ಬರೆಯಲಾಗಿದೆ. ಇದು ಯಾವ ಜಾದು? ಎಂದು ಪ್ರಶ್ನಿಸಿದರು.
ಆತ ತ್ರಿಕಾಲಜ್ಞಾನಿಯೇ?
ದೂರು ನೀಡಿರುವ ಅಧಿಕಾರಿ ರವಿಗೆ ರಾತ್ರಿ 1.30ರಲ್ಲಿ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಹೆಸರುಗಳು ಹೇಗೆ ಗೊತ್ತು? ಪೆಟ್ಟು ತಿಂದು ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಅಷ್ಟು ಜನರ ಹೆಸರುಗಳು ನೆನಪಾಗಿದ್ದು ಹೇಗೆ? ಆತನಿಗೆ ಎಷ್ಟು ನೆನಪಿನ ಶಕ್ತಿ ಇದೆ! ಆತನೇನು ತ್ರಿಕಾಲಜ್ಞಾನಿಯೇ? ಎಂದು ಕೇಂದ್ರ ಸಚಿವರು ಅಚ್ಚರಿ ವ್ಯಕ್ತಪಡಿಸಿದರು.
ಪ್ರತಿಯೊಂದರಲಿಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇಲ್ಲಿ ಅಮಾಯಕ ಜನರ ಬದುಕು ಬೀದಿಗೆ ಬಂದಿದೆ. ಗಲಭೆಯಲ್ಲಿ ಪೊಲೀಸರನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಬರೆದಿದ್ದಾರೆ. ಪೊಲೀಸರಿಗೆ ಭದ್ರತೆ ನೀಡದ ದರಿದ್ರ ಸರ್ಕಾರ ರಾಜ್ಯದಲ್ಲಿದೆ. ಆಗಿರುವ ಲೋಪ ಒಪ್ಪಿಕೊಳ್ಳುವುದು ಬಿಟ್ಟು ಸಮುದಾಯಗಳ ನಡುವೆ ಕಂದಕ ತೊಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
ನೊಂದವರಿಗೆ ಆರ್ಥಿಕ ನೆರವು:
ಇದೇ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಗಲಭೆಯಲ್ಲಿ ಆಸ್ತಿಪಾಸ್ತಿ, ಜೀವನೋಪಾಯ ಕಳೆದುಕೊಂಡ ಅನೇಕರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಅವರು ಪರಿಹಾರವಾಗಿ ನೀಡಿದರು.
ಸರಕಾರ ಸರಿಯಾಗಿ ಅಂದಾಜು ಮಾಡಿ ಕನಿಷ್ಠ ಶೇ.70ರಿಂದ 80ರಷ್ಟು ಪರಿಹಾರ ಕೊಡಬೇಕು. ನಾನು ಕೊಡುವುದು ಆರಂಭದಲ್ಲಿ ಅವರ ಜೀವನೋಪಾಯಕ್ಕೆ ಮಾತ್ರ. ಅನೇಕ ವ್ಯಾಪಾರಿಗಳು ಇಡೀ ಅಸ್ತಿಯನ್ನೇ ಕಳೆದುಕೊಂಡಿದ್ದಾರೆ. ಅವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ. ಎರಡೂ ಸಮುದಾಯಗಳ ಜನರಿಗೂ ನೆರವಾಗಿದ್ದೇನೆ ಎಂದು ಅವರು ಹೇಳಿದರು.
ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಸೇರಿ ಅನೇಕ ಮುಖಂಡರು ಜತೆಯಲ್ಲಿ ಇದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.