ನವದೆಹಲಿ: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಬಿಜೆಪಿ ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ದಕ್ಷಿಣ ಕನ್ನಡ‌ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ನೇಮಕ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್​ ಕುಮಾರ್ ಕಟೀಲ್ ಅವರನ್ನು ಅಮಿತ್ ಶಾ ಅವರು ನೇಮಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅರುಣ್​ ಸಿಂಗ್​ ನೇಮಕಾತಿ ಆದೇಶ ಹೊರಡಿಸಿದ್ದಾರೆ.



ಲೋಕಸಭಾ ಚುನಾವಣೆಯಲ್ಲಿ ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿರುವ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಂಪೂರ್ಣವಾಗಿ ಬಿಜೆಪಿ ಬೆನ್ನಿಗೆ ನಿಂತಿದ್ದ ಕರಾವಳಿಗೆ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸ್ಥಾನಮಾನ ನೀಡಿರಲಿಲ್ಲ. ಇದು ಕರಾವಳಿ ಭಾಗದಲ್ಲಿ ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಈಗ ಕರಾವಳಿ ಭಾಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.


ಬಿ.ಎಲ್. ಸಂತೋಷ್ ಪರಮಶಿಷ್ಯನಿಗೆ ರಾಜ್ಯಾಧ್ಯಕ್ಷ ಪಟ್ಟ, ಯಡಿಯೂರಪ್ಪಗೆ ಸೋಲು:
ನಳೀನ್ ಕುಮಾರ್ ಕಟೀಲ್ ಹೆಸರು ರಾಜ್ಯಾಧ್ಯಕ್ಷ ಹುದ್ದೆಗೆ ಬಹಳ ವರ್ಷಗಳಿಂದ ಕೇಳಿಬರುತ್ತಿತ್ತು.‌ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಪರಮಶಿಷ್ಯ ಎನ್ನುವುದೇ ಅರ್ಹತೆ ಎಂದು ಹೇಳಲಾಗಿತ್ತು. ಈಗಲೂ ಬಿ.ಎಲ್‌. ಸಂತೋಷ್ ದೆಹಲಿ ಮಟ್ಟದಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಿಯೇ ಶಿಷ್ಯ ನಳೀನ್ ಕುಮಾರ್ ಕಟೀಲ್ ಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ದೆಹಲಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗಿಂತಲೂ ತಾನೇ ಪ್ರಭಾವಿ ಎಂಬ ಸಂದೇಶವನ್ನು ಸಂತೋಷ್ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇನ್ನೊಂದೆಡೆ ತನ್ನ  ಆಪ್ತ ಬಳಗದವರನ್ನೇ ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಅದಕ್ಕಾಗಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ, ಸಚಿವನಾಗಿ, ಶಾಸಕನಾಗಿ ಅನುಭವ ಇರುವ ದಲಿತ ಸಮುದಾಯದ ಅರವಿಂದ ಲಿಂಬಾವಳಿ ಹೆಸರು ಪ್ರಸ್ತಾಪಿಸಿದ್ದರು. ಇತ್ತೀಚೆಗೆ ಅರವಿಂದ ಲಿಂಬಾವಳಿ ಅವರಿಗೆ ಸಂಬಂಧಿಸಿದ ವಿಡೀಯೋ ಲೀಕ್ ಆದ ಬಳಿಕ ಯಡಿಯೂರಪ್ಪ 'ಒಂದೊಮ್ಮೆ ಲಿಂಬಾವಳಿಗೆ ಅಧ್ಯಕ್ಷ ಸ್ಥಾನ ಕೊಡಲು ಸಾಧ್ಯವಾಗದಿದ್ದರೆ ತಮ್ಮ ಇನ್ನೊಬ್ಬ ಆಪ್ತರಾದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನಾದರೂ ರಾಜ್ಯಾಧ್ಯಕ್ಷ ಹುದ್ದೆಗೆ ಪರಿಗಣಿಸಿ' ಎಂಬ ಇನ್ನೊಂದು ಆಯ್ಕೆ ಮುಂದಿಟ್ಟಿದ್ದರು. ಆದರೆ ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಡೆಗೂ ಯಡಿಯೂರಪ್ಪ ಆಸೆಗೆ ತಣ್ಣೀರರೆರಚಿದ್ದಾರೆ. ಈ ಮೂಲಕ ಬಿ.ಎಲ್. ಸಂತೋಷ್ ಎದುರು ಯಡಿಯೂರಪ್ಪ ಸೋಲು ಅನುಭವಿಸಬೇಕಾಗಿದೆ.


ನಳೀನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಎಂದು ಆಯ್ಕೆ ಮಾಡಿ ಆದೇಶ ಹೊರಡಿಸಿರುವ ಅಮಿತ್ ಶಾ, ತಕ್ಷಣದಿಂದಲೇ ನಳೀನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.