ಬೆಳಗಾವಿ: ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಭಾರತೀಯ ನೌಕಾಪಡೆ ಭಾನುವಾರ ವೈಮಾನಿಕ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿದ್ದು, ಮಳೆಯಿಂದಾಗಿ ತತ್ತರಿಸಿದ ಜನರನ್ನು ರಕ್ಷಿಸಿದೆ.


COMMERCIAL BREAK
SCROLL TO CONTINUE READING

ಗೋವಾದ ಐಎನ್‌ಎಸ್ ಹನ್ಸಾ ನೌಕಾ ವಿಮಾನ ನಿಲ್ದಾಣದ ನೌಕಾಪಡೆ ಹೆಲಿಕಾಪ್ಟರ್‌ಗಳ ಮೂಲಕ ಪ್ರವಾಹದಲ್ಲಿ ಸಿಲುಕಿದ್ದ 26 ಮಂದಿಯನ್ನು ರಕ್ಷಿಸಿ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದಾಗಿ ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳ ಸರಬರಾಜು ಸುಲಭಸಾಧ್ಯವಲ್ಲದ ಕಾರಣ ಹೆಲಿಕಾಪ್ಟರ್ ಮೂಲಕ ಸುಮಾರು 800 ಕೆ.ಜಿ. ಆಹಾರ, ಕುಡಿಯುವ ನೀರನ್ನು ವಿತರಿಸಲಾಗಿದೆ. 



ಇದೇ ವೇಳೆ ಭಾನುವಾರ ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಿಸುತ್ತಾ, "ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ನಾವು  3,000 ಕೋಟಿ ರೂ.ಗಳ ತಕ್ಷಣದ ಸಹಾಯಕ್ಕಾಗಿ ಮನವಿ ಮಾಡಿದ್ದೇವೆ. 16 ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಇಲ್ಲಿನ ಜನರ ಪರಿಸ್ಥಿತಿ ಕರುಣಾಜನಕವಾಗಿದೆ. ಇನ್ನೆರಡು ದಿನಗಳಲ್ಲಿ ಉಳಿದ ಜಿಲ್ಲೆಗಳ ಸಮೀಕ್ಷೆ ನಡೆಸಿ ಪರಿಸ್ಥಿತಿ ಪರಿಶೀಲಿಸಲಿದ್ದೇವೆ" ಎಂದರು.


ಈಗಾಗಲೇ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಯಡಿಯೂರಪ್ಪ ಅವರು 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ, ರಾಜ್ಯಾದ್ಯಂತ 664 ಪರಿಹಾರ ಶಿಬಿರಗಳಲ್ಲಿ 1.61 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಪ್ರವಾಹ ಪೀಡಿತ ಪರದೇಶಗಳಲ್ಲಿ ಆಗಸ್ಟ್ 15ರವರೆಗೆ ಎಲ್ಲಾ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.