ಬೀದರ್: ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಅಧಿಕಾರಿಗಳಿಗೆ ಒಂದು ಹೊಸ ಅನುಭವ ಕೊಡುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.


COMMERCIAL BREAK
SCROLL TO CONTINUE READING

ಉಜಳಂಬದಲ್ಲಿ ಜೂನ್ 28ರಂದು  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಯಿಂದ ಜಿಲ್ಲಾಧಿಕಾರಿವರೆಗಿನ ಅಧಿಕಾರಿಗಳು ಬೆಳಗ್ಗೆಯಿಂದ ಸಂಜೆವರೆಗೆ ಜನರ ಜೊತೆಗಿದ್ದು ತಾಳ್ಮೆಯಿಂದ ಜನರ ನೋವು ಆಲಿಸುವುದನ್ನು, ಜನರು ಬದಲಾವಣೆ ಆಗುವದನ್ನು ನಾನು ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಾಣುತ್ತಿದ್ದೇನೆ ಎಂದು ಅವರು ತಿಳಿಸಿದರು. ಈ ಗ್ರಾಮವಾಸ್ತವ್ಯ ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಸ್ಪಂದಿಸುವಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದರು.


ಜನತಾದರ್ಶನದಲ್ಲಿ ಹಾಗೂ ಅಹವಾಲು ಆಲಿಕೆಯಲ್ಲಿ ಅರ್ಜಿ ಸಲ್ಲಿಸಿದ ಜನರ ನೋವುಗಳಿಗೆ ಸ್ಪಂದಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಚರ್ಚಿಸುವುದು ನಮ್ಮ ಕರ್ತವ್ಯವಾಗಿದೆ. ಈ ಗ್ರಾಮವಾಸ್ತವ್ಯ ಕಾರ್ಯಕ್ರಮ ರೂಪಿಸುವ ಮೂಲಕ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಸಿಎಂ ತಿಳಿಸಿದರು. 


ಯಾದಗಿರಿ, ರಾಯಚೂರ ಹಾಗೂ ಬೀದರ ಜಿಲ್ಲೆಗಳಲ್ಲಿ ಮಾಡಿದ ಗ್ರಾಮವಾಸ್ತವ್ಯದಲ್ಲಿ ಬಂದ ಮನವಿಗಳ ಪೈಕಿ ಆಯಾ ಪ್ರದೇಶಗಳ  ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳು ಕೆಲವು ಇವೆ. ಸಾವಿರಾರು ಜನರು ಕುಟುಂಬದಲ್ಲಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ನಾವು ಗಮನ ಕೊಡುತ್ತೇವೆ ಎಂದರು.


ಈ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಿಎಂ ಕಚೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ತಾಯಿ ಹೃದಯದಿಂದ ಕೆಲಸ ಮಾಡಿರುವುದು ಕೂಡ ನಮ್ಮ ಬಲವಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಎಂ ಕಚೇರಿಯಿಂದ ನೇರವಾಗಿ ಸೌಕರ್ಯ ಸಿಗಲಿದೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.


2006ರಲ್ಲಿ ಇಷ್ಟು ದೊಡ್ಡಮಟ್ಟದ ಗ್ರಾಮವಾಸ್ತವ್ಯ ನಡೆದಿರಲಿಲ್ಲ. ಈ ಹಿಂದೆ ನಾವು ಹಳ್ಳಿಗೆ ಹೋಗೋದೇ ರಾತ್ರಿ 1 ಗಂಟೆಯಾಗುತ್ತಿತ್ತು. ಬರೀ ಅಧಿಕಾರಿಗಳೇ ಅರ್ಜಿ ಪಡೆಯುತ್ತಿದ್ದರು. ಈ ಹಿಂದೆ ನಡೆದ ಗ್ರಾಮವಾಸ್ತವ್ಯ ವೇಳೆ ಪರಿಹಾರ ಪಡೆದುಕೊಂಡವರು ಅದನ್ನು ಈಗಲೂ ನೆನಪಿಸುವುದು ಈಗ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದ ವೇಳೆ ಗೊತ್ತಾಗಿದೆ ಎಂದು ಸಿಎಂ ಹೇಳಿದರು.


ಈ ವೇಳೆ ಸಚಿವರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ನಾರಾಯಣರಾವ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.