ಬೆಂಗಳೂರು: ಅಕ್ಟೋಬರ್ 1ರಿಂದ ರಾಜ್ಯದಾದ್ಯಂತ ಪರಿಷ್ಕೃತ ನೂತನ “ಮಾರ್ಗಸೂಚಿ ದರ” (Guidance Value) ಜಾರಿಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೋಂದಣಿ ಇಲಾಖೆ ಕಾನೂನಿನ ಪ್ರಕಾರ ಪ್ರತಿವರ್ಷ ಮಾರ್ಗಸೂಚಿ ದರ ಪರಿಷ್ಕರಣೆಯಾಗಬೇಕು. ಆದರೆ ಕಳೆದ 5 ವರ್ಷದಿಂದ ಮಾರ್ಗಸೂಚಿ ದರ ಪರಿಷ್ಕರಣೆಯಾಗಿಲ್ಲ. ಇದರಿಂದ ಹಲವು ಕಡೆ ಭೂಮಿ ಮಾರಾಟಗಾರರು ಮತ್ತು ರೈತರಿಗೆ ಅನ್ವಯವಾಗಿದ್ದರೆ, ಕಪ್ಪು ಹಣ ವಹಿವಾಟಿಗೂ ಕಾರಣವಾಗಿದೆ. ಮಾರ್ಗಸೂಚಿ ದರ ಪರಿಷ್ಕರಣೆಯಾಗದಿರುವುದು ಪರೋಕ್ಷವಾಗಿ ಕಪ್ಪು ಹಣ ವಹಿವಾಟಿಗೂ ಅವಕಾಶ ನೀಡಿದಂತಾಗಿದೆ. ಹೀಗಾಗಿ ಅಕ್ಟೋಬರ್ 1ರಿಂದ ನೂತನ ಮಾರ್ಗಸೂಚಿ ದರ ಜಾರಿಯಾಗಲಿದೆ’ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಮಾರ್ಗಸೂಚಿ ದರ ಹೆಚ್ಚಳ, ಎಲ್ಲೆಲ್ಲಿ ಎಷ್ಟೆಷ್ಟು?


ಮಾರ್ಗಸೂಚಿ ದರ ಯಾವ ಯಾವ ಪ್ರದೇಶಗಳಲ್ಲಿ ಎಷ್ಟು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕರಣೆಗೆ ಯಾವ ನಿಯಮಗಳನ್ನು ಅನ್ವಯಿಸಲಾಗಿದೆ ಎಂಬುದರ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಇದೇ ವೇಳೆ ಮಾಹಿತಿ ನೀಡಿದರು. ‘ಮಾರುಕಟ್ಟೆ ದರಕ್ಕೂ ಮಾರ್ಗಸೂಚಿ ದರಕ್ಕೂ ಸಾಮ್ಯತೆ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ.10ರಷ್ಟು ಏರಿಕೆ ಮಾಡಲಾಗಿದೆ. ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಪರಿಷ್ಕೃತ ದರವನ್ನು ಶೇ.20 ರಿಂದ ಶೇ.25ರಷ್ಟು ಹೆಚ್ಚಿಸಲಾಗಿದೆ. ಇನ್ನೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500 ಪಟ್ಟು ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಮಾರ್ಗಸೂಚಿ ದರ 5 ರಿಂದ 10 ಲಕ್ಷ ಇದ್ದರೆ, ಮಾರುಕಟ್ಟೆ ದರ 10 ಕೋಟಿಗೂ ಅಧಿಕವಿದೆ. ಇಂತಹ ಪ್ರದೇಶಗಳಲ್ಲಿ ನೂತನ ಮಾರ್ಗಸೂಚಿ ದರವನ್ನು ಶೇ.50ರಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿದರು.


ಇದನ್ನೂ ಓದಿ: ಮನೇಲಿ ಖಾಲಿ ಕುಳಿತಿದ್ದರೆ ಸರ್ಕಾರದ ಈ ಸ್ಕೀಮ್‌ಗೆ ಅಫ್ಲೈ ಮಾಡಿ


ಇದಲ್ಲದೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಾಗಿದ್ದರೆ, ಅಂತಹ ಭಾಗದಲ್ಲಿ ಮಾರ್ಗಸೂಚಿ ದರವನ್ನು ಮತ್ತಷ್ಟು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರ್ಗಸೂಚಿ ದರ ಶೇ.0ಯಿಂದ ಶೇ.50ರವರೆಗೆ ಪ್ರತಿಯೊಂದು ಪ್ರದೇಶಕ್ಕೂ ಸಂಬಂಧಿಸಿದಂತೆ “ಕೇಸ್ ಬೈ ಕೇಸ್” ಹೆಚ್ಚಾಗಲಿದೆ. ಅಕ್ಟೋಬರ್ 1ರಂದು ಮೊದಲ ಹಂತವಾಗಿ ಬೆಂಗಳೂರಿನ ಪರಿಷ್ಕೃತ ದರ ಜಾರಿಯಾಗಲಿದೆ. ಉಳಿದಂತೆ ಪ್ರತಿ ಜಿಲ್ಲೆಯಲ್ಲಿ ಅಲ್ಲಿನ ಉಪ ಸಮಿತಿ (ಸಬ್ ಕಮಿಟಿ) ಚರ್ಚಿಸಿ ನೂತನ ಮಾರ್ಗಸೂಚಿ ದರವನ್ನು ಹಂತಹಂತವಾಗಿ ಜಾರಿಗೊಳಿಸಲಿದೆ. ಒಟ್ಟಾರೆ ಪರಿಷ್ಕೃತ ಮಾರ್ಗಸೂಚಿ ದರ ಸರಾಸರಿ ಶೇ.25ರಿಂದ ಶೇ.30ರಷ್ಟು ಹೆಚ್ಚಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು


ತಕರಾರು ಸಲ್ಲಿಸಲೂ ಅವಕಾಶವಿದೆ!


ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರಬಾರದು ಎಂಬ ಕಾನೂನಿದೆ. ಹೀಗಾಗಿ ಈ ಅಲ್ಪ ನ್ಯೂನ್ಯತೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆ ನಿಟ್ಟಿನಲ್ಲಿ ಈ ಕ್ರಮವನ್ನು ಮಾರ್ಗಸೂಚಿ ದರ ಪರಿಷ್ಕರಣೆ ಎಂಬುದಕ್ಕಿಂತ ನ್ಯೂನ್ಯತೆಯನ್ನು ಸರಿಪಡಿಸಲಾಗಿದೆ ಎಂಬುದು ಸೂಕ್ತವೆಂದು ಅಭಿಪ್ರಾಯಪಟ್ಟ ಸಚಿವ ಕೃಷ್ಣ ಬೈರೇಗೌಡ ಅವರು, ಮಾರ್ಗಸೂಚಿ ದರ ಪರಿಷ್ಕರಣೆಯಲ್ಲಿ ಯಾರಿಗಾದರೂ ತಕರಾರು ಇದ್ದರೆ, ಅದನ್ನೂ ಸಲ್ಲಿಸಬಹುದು. ಅಧಿಕಾರಿಗಳು ತಕರಾರುಗಳನ್ನೂ ಗಮನಿಸಿ ಹೊಸ ಮಾರ್ಗಸೂಚಿ ದರವನ್ನು ಜಾರಿಗೊಳಿಸುವರು ಎಂದು ತಿಳಿಸಿದರು.


ಇದನ್ನೂ ಓದಿ: ಸಾಲ ವಸೂಲಾತಿಗೆ ಚಾಕೋಲೆಟ್‌ ಮೊರೆ ಹೋದ SBI


ಕಾವೇರಿ-2 ಹೆಚ್ಚುತ್ತಿರುವ ನೋಂದಣಿಗಳು


ಕಾವೇರಿ-2 ತಂತ್ರಾಂಶದ ಬಳಕೆಯ ನಂತರ ಆಸ್ತಿ ನೋಂದಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ‘ಕಾವೇರಿ-2 ತಂತ್ರಾಂಶ ಜಾರಿಯಾದ ಸಂದರ್ಭದಲ್ಲಿ ಸಣ್ಣ-ಪುಟ್ಟ ನ್ಯೂನ್ಯತೆಗಳು ಇದ್ದದ್ದು ನಿಜ. ಆದರೆ ಪ್ರಸ್ತುತ ಬಹುತೇಕ ನ್ಯೂನ್ಯತೆಗಳನ್ನೂ ಸರಿಪಡಿಸಲಾಗಿದೆ. ಪರಿಣಾಮ ರಾಜ್ಯದಲ್ಲಿ ಪ್ರತಿದಿನ ಅಂದಾಜು 10-13 ಸಾವಿರ ಆಸ್ತಿ ನೋಂದಣಿಗಳಾಗುತ್ತಿವೆ. ಕೆಲ ದಿನಗಳಲ್ಲಿ ಒಂದೇ ಕಚೇರಿಯಲ್ಲಿ 140ಕ್ಕೂ ಅಧಿಕ ರಿಜಿಸ್ಟ್ರೇಷನ್ ಆಗಿದ್ದೂ ಇದೆ. ಕಳೆದ ವರ್ಷಕ್ಕಿಂತ ಈ ಸೆಪ್ಟೆಂಬರ್‍ನಲ್ಲಿ ಈಗಾಗಲೇ 800 ಕೋಟಿ ರೂ.ಗೂ ಅಧಿಕ ಆದಾಯ ಸರ್ಕಾರಕ್ಕೆ ಬಂದಿದೆ. ಇನ್ನೂ ಜನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನವಿಡೀ ಕಾಯುವ ಬದಲು ಕೇವಲ 20 ನಿಮಿಷದಲ್ಲಿ ತಮ್ಮ ಕೆಲಸ ಮುಗಿಸುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ವಿ.ರಶ್ಮಿ ಮಹೇಶ್, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಡಾ.ಮಮತಾ ಬಿ.ಆರ್ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.