ಬೆಂಗಳೂರು:  ಸಂಶೋಧನೆ- ಅಭಿವೃದ್ಧಿ ಹಾಗೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ದಿಮೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಹೊಸ ನೀತಿ ತರಲಾಗುವುದು ಎಂದು ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ(Dr CN AshwathNarayana) ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

'ನಗರದಲ್ಲಿ 11ನೇ ಬೆಂಗಳೂರು ಇಂಡಿಯಾ ನ್ಯಾನೊ' ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, "ಹಿರಿಯ ವಿಜ್ಞಾನಿ, ಭಾರತ ರತ್ನ ಸಿಎನ್‌ಆರ್‌ ರಾವ್‌ ಅವರ ಮಾರ್ಗದರ್ಶದಲ್ಲಿ ಹೊಸ ಅನ್ವೇಷಣೆಗಳಿಗೆ ಒತ್ತು ನೀಡುವಂಥ ವಿಜ್ಞಾನ ತಂತ್ರಜ್ಞಾನದ ಹೊಸ ನೀತಿ ತರಲಾಗುವುದು.  ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಹಾಗೂ  ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವ ನಮ್ಮ ಸರ್ಕಾರ, ವಿಜ್ಞಾನಿಗಳು ಸಂಶೋಧಕರಿಗೆ ಹೆಚ್ಚಿನ ಮನ್ನಣೆ ಗೌರವ ಕೊಡುತ್ತದೆ.  ನಮ್ಮ ದೇಶದ ಭವಿಷ್ಯ ಬದಲಿಸುವ ಸಾಮರ್ಥ್ಯ ಇರುವ ಸಂಶೋಧಕರಿಗೆ ನಮ್ಮ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ(BS Yediyurappa) ಅವರ ಬೆಂಬಲ ಪ್ರೋತ್ಸಾಹ ಇರುತ್ತದೆ," ಎಂದು ತಿಳಿಸಿದರು.


"ವಿಶ್ವಾದ್ಯಂತ ನಡೆಯುತ್ತಿರುವ ಸಂಶೋಧನೆಗಳ ಮಾಹಿತಿ ವಿನಿಮಯ ಆಗಬೇಕು.  ಇದೇ ಕಾರಣಕ್ಕೆ  'ಬೆಂಗಳೂರು ಇಂಡಿಯಾ ನ್ಯಾನೊ' ಸಮಾವೇಶ ನಡೆಯುತ್ತಿದೆ.  ಇಂಥ ಎಲ್ಲ ತಾಂತ್ರಿಕ ಮಾಹಿತಿಯನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಇದು ಸೂಕ್ತ ವೇದಿಕೆ.  ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ನ್ಯಾನೊ ಮಾಡಿರುವ ಸಾಧನೆಗಳು ಗಮನಾರ್ಹ. ಈ ಸಮಾವೇಶದ ಮಹತ್ವವನ್ನು ಅರಿತೇ ರಾಜ್ಯ ಸರ್ಕಾರ ಈ ಸಮಾವೇಶಕ್ಕೆ  ಹೆಚ್ಚಿನ ಆದ್ಯತೆ ನೀಡುತ್ತಿದೆ," ಎಂದರು.


ನ್ಯಾನೊ ಪಾರ್ಕ್‌:
"ಸ್ಟಾರ್ಟ್‌ಅಪ್‌, ಕೊ ವರ್ಕಿಂಗ್‌ ಸ್ಪೇಸ್‌, ಇನ್‌ಕ್ಯುಬೇಟರ್‌ ಸೆಂಟರ್‌ಗಳಿಗೆ ಹೆಸರಾಗಿರುವ ಬೆಂಗಳೂರು ನ್ಯಾನೊ ಕೇಂದ್ರವಾಗಿಯೂ ಹೆಸರು ಮಾಡಬೇಕು. ಈ ನಿಟ್ಟಿನಲ್ಲಿ 'ನ್ಯಾನೊ ಪಾರ್ಕ್‌' ನಿರ್ಮಿಸುವ ಸಂಬಂಧ ಸಿಎನ್‌ಆರ್‌ ರಾವ್ ಜತೆ ಮಾತುಕತೆ ನಡೆದಿದೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್‌, ಸೆಂಟರ್‌ ಫಾರ್‌ ನ್ಯಾನೊ ಸೈನ್ಸ್‌ ಸೇರಿದಂತೆ ಕರ್ನಾಟಕದಲ್ಲಿರುವ ಎಲ್ಲ ಪ್ರಮುಖ ವಿಜ್ಞಾನ ಸಂಸ್ಥೆಗಳ ಸಹಯೋಗದಲ್ಲಿ ನ್ಯಾನೊ ತಂತ್ರಜ್ಞಾನದಲ್ಲಿ ಅನೇಕ ಸಾಧನೆಗಳಾಗಿದ್ದು, ಬೆಂಗಳೂರನ್ನು ನ್ಯಾನೊ ತಂತ್ರಜ್ಞಾನದ ಕೇಂದ್ರವನ್ನಾಗಿಸಲು ನಮ್ಮ ಸರ್ಕಾರ ಎಲ್ಲ ರೀತಿಯ ಅನುಕೂಲ ಕಲ್ಪಿಸಲಿದೆ," ಎಂದು ಭರವಸೆ ನೀಡಿದರು.  


"ನೀತಿ ಆಯೋಗ ಬಿಡುಗಡೆ ಮಾಡಿರುವ ಹೊಸ ಆವಿಷ್ಕಾರ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ. ನ್ಯಾನೊ ಸಂಶೋಧನಾ ಕೇಂದ್ರಗಳು ಬೆಂಗಳೂರಲ್ಲಿ ತಲೆ ಎತ್ತುವ ಮೂಲಕ ಇತರ ಉದ್ದಿಮಗಳಿಗೆ ಬಲ ತುಂಬಬೇಕು. ಜನರ ಜೀವನ ಮಟ್ಟ ಸುಧಾರಣೆ ಹಾಗೂ ಆರ್ಥಿಕತೆ ಸುಧಾರಣೆಗೂ ಈ ತಂತ್ರಜ್ಞಾನ ದೊಡ್ಡ ಕೊಡುಗೆ ನೀಡಬಲ್ಲದು,"ಎಂದು ವಿಶ್ವಾಸ ವ್ಯಕ್ತಪಡಿಸಿದರು.