ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸುಮಲತಾ ಅಂಬರೀಶ್ ವಿರುದ್ಧ ಸೋಲನುಭವಿಸಿದ ಬಳಿಕ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಆಂಧ್ರಪ್ರದೇಶ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಜಗನ್ ಮೋಹನ್ ರೆಡ್ಡಿ ಅವರನ್ನು ಮಂಗಳವಾರ ವಿಜಯವಾಡದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದ ಜಗನ್, ಇಂತಹ ಸಂದರ್ಭದಲ್ಲಿ ಯುವ ರಾಜಕಾರಣಿಗಳಿಗೆ ಉತ್ತಮ ಅವಕಾಶಗಳಿವೆ, ಸಾರ್ವಜನಿಕ ಜೀವನದಲ್ಲಿ, ಯಾವುದಕ್ಕೂ ಹಿಂಜರಿಯದೆ ಜನಸೇವೆಯೊಂದನ್ನೇ ಗುರಿಯಾಗಿಟ್ಟುಕೊಂಡು ಮುಂದುವರಿಯುವಂತೆ ನಿಖಿಲ್ ಕುಮಾರಸ್ವಾಮಿಗೆ ಸಲಹೆ ನೀಡಿದ್ದು, ರಾಜಕೀಯದಲ್ಲಿ ಉತ್ತಮ ಭವಿಷ್ಯ ಹಾಗು ಯಶಸ್ಸನ್ನು ಹಾರೈಸಿದರು.


ಈ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ನಿಖಿಲ್, "ಆಂಧ್ರದಲ್ಲಿ 'ಜಗನ್ ಅಣ್ಣಾ' ಎಂದೇ ಜನಪ್ರಿಯರಾಗಿರುವ ಜಗನ್ ಮೋಹನ್ ರೆಡ್ಡಿಯವರ ರಾಜಕೀಯ ಜೀವನ, ರಾಜಕೀಯ ಕ್ಷೇತ್ರದಲ್ಲಿರುವ ಎಲ್ಲ ಯುವಕರಿಗೆ, ಕಾರ್ಯಕರ್ತರಿಗೆ ಪ್ರೇರಣೆ ನೀಡುವಂಥದ್ದು. ಹತ್ತು ವರ್ಷಗಳಿಗೂ ಹೆಚ್ಚು ಸುಧೀರ್ಘ ಕಾಲದ ಅವರ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಜನರ ಸೇವೆಗಾಗಿ ಅವರ ಬದ್ದತೆ ಮತ್ತು ಎದುರಾದ ಎಲ್ಲ ಅಡೆತಡೆ, ಸೋಲು, ಸವಾಲುಗಳನ್ನು ಮೀರಿ, ಗುರಿಮುಟ್ಟುವವರೆಗೂ ವಿರಮಿಸದ ಅವರ ಛಲ, ದಿಟ್ಟತನ, ಹೋರಾಟಗಳಿಗೆ ಜನ ಆಶೀರ್ವಾದ ಮಾಡಿದ್ದಾರೆ" ಎಂದಿದ್ದಾರೆ.