ಶೀಘ್ರದಲ್ಲೇ ಬೆಂಗಳೂರು ಉತ್ತರದಲ್ಲೂ ನಿಮ್ಹಾನ್ಸ್ ಘಟಕ: DCM ಡಾ. ಅಶ್ವತ್ಥನಾರಾಯಣ ಭರವಸೆ
ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಾರಂಭವಾದ ನಿಮ್ಹಾನ್ಸ್ ಸಂಸ್ಥೆ ಇಂದು ದೇಶಕ್ಕೆ ಮಾದರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದರು.
ಬೆಂಗಳೂರು: ನಿಮ್ಹಾನ್ಸ್ ಆಸ್ಪತ್ರೆ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರದಲ್ಲಿ ಸಂಸ್ಥೆಯ ಘಟಕ ಶೀಘ್ರದಲ್ಲೇ ಸ್ಥಾಪನೆ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಶುಕ್ರವಾರ ತಿಳಿಸಿದ್ದಾರೆ.
ನಿಮ್ಹಾನ್ಸ್ ಇನ್‌ಸ್ಟಿಟ್ಯೂಟ್ ದಿನಾಚರಣೆಯಲ್ಲಿ ಭಾಗವಹಿಸಿದ ಡಾ. ಅಶ್ವತ್ಥನಾರಾಯಣ ಅವರು, 'ಹ್ಯೂಮನ್ ಜಿನೋಮ್ ಲ್ಯಾಬ್', 'ನ್ಯೂರೊ ಬಯಾಲಜಿ ರಿಸರ್ಚ್ ಸೆಂಟರ್', 'ನ್ಯೂರೊ ಇನ್ಫೆಕ್ಷನ್ ಲ್ಯಾಬ್' ಉದ್ಘಾಟಿಸಿ ಮಾತನಾಡಿದರು.
"ನಿಮ್ಹಾನ್ಸ್ ಸಂಸ್ಥೆ ವಿಸ್ತೃತವಾಗಿ ಬೆಳೆಯಬೇಕು. ಯಾವುದೇ ಒಂದು ಭಾಗಕ್ಕೆ ಸೀಮಿತವಾಗದೇ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಬೇಕು. ಸದ್ಯ ಇಲ್ಲಿ 400 ಹಾಸಿಗೆಯ ಸಾಮರ್ಥ್ಯ ಇದ್ದು, ಈ ಸಾಮರ್ಥ್ಯ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಹೆಚ್ಚಿರುವ ಜತೆಗೆ ಈ ಗುಣಮಟ್ಟವನ್ನು ನಿರೀಕ್ಷಿಸಲಾಗದು. ಹಾಗಾಗೀ ಈ ಕೆಲಸ ತ್ವರಿತವಾಗಿ ಆಗಬೇಕಿದೆ. ಇದಲ್ಲದೇ, ಬೆಂಗಳೂರು ಉತ್ತರದಲ್ಲಿ ಸಂಸ್ಥೆಯ ಘಟಕ ಸ್ಥಾಪಿಸುವ ಉದ್ದೇಶವೂ ಇದೆ. ಇಂಥ ದೊಡ್ಡ ಜವಾಬ್ದಾರಿಗಳನ್ನು ನಾವು ನೀವು ಸೇರಿ ಮಾಡೋಣ. ಉಪಮುಖ್ಯಮಂತ್ರಿಯಾಗಿ ನಾನು ಎಲ್ಲ ರೀತಿಯ ಸಹಕಾರ ನೀಡಲು ಬದ್ಧ,"ಎಂದು ಅವರು ಭರವಸೆ ನೀಡಿದರು.
"ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಾರಂಭವಾದ ನಿಮ್ಹಾನ್ಸ್ ಸಂಸ್ಥೆ ಇಂದು ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಜೋಡಿಸಿದರೆ ಇಂಥ ಉತ್ತಮ ಸಂಸ್ಥೆ ಸ್ಥಾಪಿಸಬಹುದು ಎನ್ನಲು ಈ ಸಂಸ್ಥೆಯೇ ನಿರ್ದಶನ. ಸಂಸ್ಥೆಯ 75ನೇ ವರ್ಷಾಚರಣೆ ಪ್ರಯುಕ್ತ ಧರ್ಮಶಾಲೆ ನಿರ್ಮಿಸುವ ಆಶಯ ಬಹಳ ಉತ್ತಮವಾದುದು," ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. .
"ನಮ್ಮ ಸಮಾಜದಲ್ಲಿ ಮಾನಸಿಕ ಸಮಸ್ಯೆ ಇದೆ ಎಂದು ಒಪ್ಪಿಕೊಂಡು ಚಿಕಿತ್ಸೆಗೆ ಬರುವವರ ಸಂಖ್ಯೆ ಅತಿ ವಿರಳ. ಅಂಥವರಿಗೆ ಉತ್ತಮ ಚಿಕಿತ್ಸೆ ಕೊಡದಿದ್ದರೆ ತಪ್ಪಾಗುತ್ತದೆ. ಆದರೆ, ಚಿಕಿತ್ಸೆ ನೀಡಲು ನಮ್ಮಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಇದೇ ದೊಡ್ಡ ಸಮಸ್ಯೆ ಎಂದು ವೈದ್ಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ಹೇಳಿದ್ದಾರೆ. ಈ ಸಮಸ್ಯೆಗೆ ಆದಷ್ಟು ಬೇಗ ಅವರು ಪರಿಹಾರ ಕಂಡುಕೊಂಡು, ಉತ್ತಮ ಕಾರ್ಯಗಳನ್ನು ಮಾಡಲಿದ್ದಾರೆ ಎಂಬ ಭರವಸೆ ನನಗಿದೆ," ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ತಂತ್ರಜ್ಞಾನದ ಮೊರೆ:
"ರೋಗಿಗಳ ಸಮಸ್ಯೆಗಳನ್ನು ಅರಿತು ತ್ವರಿತವಾಗಿ ಸ್ಪಂದಿಸುತ್ತಿರುವ ನಿಮ್ಹಾನ್ಸ್ ಸಂಸ್ಥೆ, ರಾಜ್ಯ ಸರ್ಕಾರದ ಜತೆ ಕೈ ಜೋಡಿಸಿ ಹಲವು ಉತ್ತಮ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ರೋಗಿಗಳಿಗೆ ಉತ್ತಮ ಸೇವೆ ಒದಗಿಸಲು ತಂತ್ರಜ್ಞಾನದ ಸದ್ಭಳಕೆ ಮಾಡಿಕೊಳ್ಳುತ್ತಿದೆ. ಜತೆಗೆ, ಮಕ್ಕಳು ಹಾಗೂ ಯುವ ಜನರಿಗೆ ಮಾನಸಿಕ ಚಿಕಿತ್ಸೆ ನೀಡುವ 'ಯುವ ಸ್ಪಂದನೆ'ಯಂಥ ಹಲವು ಉತ್ತಮ ಕಾರ್ಯಕ್ರಮಗಳನ್ನು ಜಾರಿ ತಿಂದಿದೆ. ಬೆಂಗಳೂರಿನ ಸಂಸ್ಥೆಯ ಸಹಕಾರದಲ್ಲಿ 'ಮೆಂಟಲ್ ಹೆಲ್ತ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ' ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿದ್ದು, ಇದು ಸಂಪನ್ಮೂಲ ಕೊರತೆಯ ಮಾಹಿತಿ ನೀಡುವ ಜತೆಗೆ ಸಿಬ್ಬಂದಿ ತರಬೇತಿಗೆ ಪೂರಕವಾಗಿದೆ," ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯ ಶಿಕ್ಷಣ ಸಚಿವ ಡಾ. ಸುಧಾಕರ್, ಸಂಸ್ಥೆ ನಿರ್ದೇಶಕ ಡಾ. ಬಿಎಸ್ ಗಂಗಾಧರ್, ಡಾ. ಸಿಎಸ್ ಶರ್ಮ, ಡಾ. ಆರ್. ಶೇಖರ್, ಡಾ. ಸತ್ರಪ್ರಭಾ, ಡಾ. ಗುರುರಾಜ್ ಉಪಸ್ಥಿತರಿದ್ದರು.