ಬೆಂಗಳೂರು: ನನ್ನನ್ನು ಭೇಟಿಯಾಗಲು ಯಾವ ಶಾಸಕರೂ ಯಾವುದೇ ಸಮಯ ಕೇಳಿಲ್ಲ. ಯಾರಾದರೂ ನನ್ನನ್ನು ಭೇಟಿಯಾಗಲು ಬಯಸಿದರೆ ಕಚೇರಿಗೆ ಬಂದು ಭೇಟಿಯಾಗಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದೊಮ್ಮಲೂರಿನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಭವಿಷ್ಯದ ದೃಷ್ಟಿಯಿಂದ ಇಂದು ಮಹತ್ವದ ದಿನವಾಗಿದೆ. ನಾನೆಲ್ಲೂ ಅಜ್ಞಾತ ಸ್ಥಳಕ್ಕೆ ಹೋಗಿಲ್ಲ, ಬೆಂಗಳೂರಿನಲ್ಲಿಯೇ ಇದ್ದೇನೆ. ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗೂ ನನಗೂ ಯಾವುದೇ ಸಂಬಂಧವಿಲ್ಲ. ಸಂವಿಧಾನದ ಪ್ರಕಾರ ನಾನು ಕಾರ್ಯನಿರ್ವಹಿಸುತೇನೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.


ಒಂದೆಡೆ ಮೈತ್ರಿ ಸರ್ಕಾರದ 12 ಶಾಸಕರು ರಾಜೀನಾಮೆ ನೀಡಿದ್ದು, ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿರುವುದರಿಂದ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಇಂದು ತೆಗೆದುಕೊಳ್ಳುವ ನಿರ್ಧಾರ ಮೈತ್ರಿ ಸರ್ಕಾರದ ಅಳಿವು ಮತ್ತು ಉಳಿವಿಗೆ ಕಾರಣವಾಗಿದೆ. 


ಮತ್ತೊಂದೆಡೆ, ಮೈತ್ರಿ ಸರ್ಕಾರ ಬಹುಮತ ಕಳೆದು ಕೊಂಡಿದ್ದು, ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಘೋಷಿಸಿರುವುದರಿಂದ ಬಹುಮತ ಪಡೆದುಕೊಂಡಿರುವ ಬಿಜೆಪಿ, ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡುತ್ತಾರೆ ಎಂದು ಕಾದು ಕುಳಿತಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಮೈತ್ರಿ ಸರ್ಕಾರಕ್ಕೆ ಇಂದು ನಿರ್ಣಾಯಕ ದಿನವಾಗಿದ್ದು, ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಎಲ್ಲರಲ್ಲಿ ತೀವ್ರ ಕುತೂಹಲ ಮೂಡಿದೆ.