ಬೆಂಗಳೂರು: ಬಳ್ಳಾರಿಯ ಅಕ್ರಮ ಅದಿರು ಗಣಿಗಾರಿಕೆಗೆ ಸಂಬಂಧಿಸಿದಂತೆ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ ಸಿಂಗ್ ವಿರುದ್ಧ ನಗರದ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.


COMMERCIAL BREAK
SCROLL TO CONTINUE READING

ಪ್ರಕರಣದ ಪ್ರಮುಖ ಆರೋಪಿಗಳಾದ ಜನಾರ್ದನ ರೆಡ್ಡಿ, ಅಲಿಖಾನ್, ನಾಗೇಂದ್ರ ಹಾಗೂ ಸುರೇಶ್ ಬಾಬು ಬುಧವಾರ ವಿಚಾರಣೆಗೆ ಹಾಜರಾಗಿದ್ದರು. ಆದರೆ, ಆನಂದ್ ಸಿಂಗ್ ಗೈರು ಹಾಜರಾಗಿದ್ದರು. ವಿಚಾರಣೆ ವೇಳೆ, ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ಪರ ವಕೀಲರು, ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದರು. 


ಇತ್ತೀಚೆಗೆ ರೆಸಾರ್ಟ್‌ ನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ಆನಂದ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಆದ್ದರಿಂದ ಹಾಜರಾತಿಗೆ ವಿನಾಯಿತಿ ನೀಡಬೇಕು ಎಂದು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ಮನವಿ ಮಾಡಿದರು. 


ಇದಕ್ಕೆ ಅಕ್ರೋಶ ವ್ಯಕ್ತಪಡಿಸಿದ ನ್ಯಾಯಾಧೀಶರು, ಹಲ್ಲೆಗೂ ಮೊದಲು ನಡೆದಿದ್ದ ವಿಚಾರಣೆಗೆ ಗೈರಾಗಲು ಕಾರಣವೇನೆಂದು ಪ್ರಶ್ನಿಸಿದರಲ್ಲದೆ, ಆರೋಪಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡುವಂತೆ ಆದೇಶ ಹೊರಡಿಸಿದರು.