ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದ್ದರೂ, ಉತ್ತರಕರ್ನಾಟಕ ಭಾಗದ ಚರ್ಚೆಗೆ ಹೆಚ್ಚು ಸಮಯ ಸಿಗ್ತಿಲ್ಲ ಅನ್ನೋ ಅಸಮಾಧಾನ ಹೊರ ಹೊಮ್ಮಿದೆ. ಇದ್ರ ಜೊತೆಗೆ ಶಾಸಕರ ಹಾಜರಾತಿ ಕಡಿಮೆಯಾಗಿರುವ ಕುರಿತು ಬೇಸರದ ಅಭಿಪ್ರಾಯವೂ ವ್ಯಕ್ತವಾಗಿದೆ.  


COMMERCIAL BREAK
SCROLL TO CONTINUE READING

ಸದನದ ಆರಂಭದಿಂದಲೂ ಶಾಸಕರ ಹಾಜರಾತಿ ಕಡಿಮೆ ಇರುವ ಬಗ್ಗೆ ಸಾರ್ವತ್ರಿಕ ಟೀಕೆ ವ್ಯಕ್ತವಾಗಿದ್ದರೂ, ಶಾಸಕರ ಹಾಜರಾತಿಯಲ್ಲಿ ಗಣನೀಯ ಹೆಚ್ಚಳವಾಗಲೇ ಇಲ್ಲ. ಬುಧವಾರ ನಡೆದ ಕಲಾಪವೂ ಸಹ ಇದಕ್ಕೆ ಹೊರತಾಗಿಲ್ಲ. ನಿನ್ನೆಯ ಕಲಾಪದಲ್ಲಿ ಉತ್ತರಕರ್ನಾಟಕ ಭಾಗದ ಅಭಿವೃದ್ಧಿ, ನೀರಾವರಿ, ನಂಜುಡಪ್ಪ ವರದಿ ಅನುಷ್ಠಾನದ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲೂ ಶಾಸಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಕಲಾಪದಲ್ಲಿ ಶಾಸಕರ ಸಂಖ್ಯೆ ನೂರರ ಗಡಿ ದಾಟಿರಲಿಲ್ಲ. ಹಲವು ಸಚಿವರು ಸಹ ಕಲಾಪದಿಂದ ದೂರ ಉಳಿದಿರೋದಕ್ಕೆ ಕಲಾಪದಲ್ಲಿ ವಿರೋಧವೂ ವ್ಯಕ್ತವಾಯಿತು.


ಉತ್ತರಕರ್ನಾಟಕ ಭಾಗದ ಶಾಸಕರ ಹಾಜರಾತಿಯಲ್ಲೂ ಸಹ ಅಂತಹ ಹೆಚ್ಚಳವಾಗದಿರುವುದು ವಿಶೇಷವಾಗಿದೆ. ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಹೆಚ್ಚು ಸಿಗಬೇಕು ಅನ್ನೋ ಕಾರಣಕ್ಕೆ ಸಮಯ ಮೀಸಲಿಟ್ಟರೂ, ರಾಜಕೀಯವಾದ ವಿಚಾರಗಳ ಚರ್ಚೆಗೆ ಹೆಚ್ಚಿನ ಸಮಯ ಮೀಸಲಾಗ್ತಿರೋದ್ರಿಂದ ಹೆಚ್ಚಿನ ಸಮಯ ಉತ್ತರಕರ್ನಾಟಕದ ವಿಚಾರ ಚರ್ಚೆಗೆ ಬರುತ್ತಿಲ್ಲ. ಈ ಮಧ್ಯೆ ಸಿಎಂ ಸಿದ್ಧರಾಮಯ್ಯ ಅವರು ಮೈಸೂರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕಾಗಿರೋದ್ರಿಂದ ಗುರುವಾರದೊಳಗೆ ಚರ್ಚೆ ಮುಗಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಬಾರಿಯೂ ಸಮರ್ಪಕವಾದ ರೀತಿಯಲ್ಲಿ ಉತ್ತರಕರ್ನಾಟಕದ ವಿಚಾರ ಚರ್ಚೆಯಾಗೋ ಪರಿಸ್ಥಿತಿ ನಿರ್ಮಾಣವಾಗುತ್ತಿಲ್ಲ ಎಂದು ಹಲವು ಉತ್ತರಕರ್ನಾಟಕ ಭಾಗದ ಶಾಸಕರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.