ಎಸ್‌ಸಿ ಎಸ್ಟಿಗಳಿಗೆ ಸ್ಪರ್ಧಾತ್ಮಕ ತರಬೇತಿ ಕೇಂದ್ರ ತೆರೆಯಲು ಸೂಚನೆ: ಡಿಸಿಎಂ
ದಲಿತ ಸಮುದಾಯದ ಮಕ್ಕಳು ಆಡಳಿತ ಕ್ಷೇತ್ರದಲ್ಲಿ ಹೆಚ್ಚು ಹುದ್ದೆ ಪಡೆಯುವಂಥ ಶಿಕ್ಷಣ ಸಿಗಬೇಕು.
ಬೆಂಗಳೂರು: ಎಸ್‌ಸಿ ಎಸ್‌ಟಿ ಸಮುದಾಯಗಳ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲು ಬಿಬಿಎಂಪಿ ವ್ಯಾಪ್ತಿಯ 1 ಎಕರೆ ಜಾಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕೇಂದ್ರ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಛಲವಾದಿ ಮಹಾಸಭಾ ವತಿಯಿಂದ ಅಂಬೇಡ್ಕರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು ವಿಷಯದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತ ಸಮುದಾಯದ ಮಕ್ಕಳು ಆಡಳಿತ ಕ್ಷೇತ್ರದಲ್ಲಿ ಹೆಚ್ಚು ಹುದ್ದೆ ಪಡೆಯುವಂಥ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಟೆಕ್ನಾಲಜಿ ಹೊಂದಿರುವ ತರಬೇತಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು.
ಹೋರಾಟದಿಂದಲೇ ನಾವು ಗುರಿಮುಟ್ಟಬೇಕು:
ನಮ್ಮ ದೇಶದಲ್ಲಿ ಈಗಲೂ ಕೂಡ ಮೇಲು ಕೀಳು ಎಂಬ ಭಾವನೆ ಇದೆ. ಕೆಲ ದೇವಸ್ಥಾನಗಳಿಗೆ ಈಗಲೂ ಪ್ರವೇಶ ಇಲ್ಲ. ಕೆಲ ಮನೆಗಳಲ್ಲಿ ದಲಿತರನ್ನು ಹೀನಾಮಾನವಾಗಿ ನಡೆಸಿಕೊಳ್ಳುತ್ತಾರೆ. ಜಾತಿಯಲ್ಲಿ ಪರಿಶಿಷ್ಟರೇ ಆದರೂ ಅಸ್ಪೃಶ್ಯರಂತೆ ನೋಡುತ್ತಾರೆ. ನಮ್ಮನ್ನು ಮುಟ್ಟಿಸಿಕೊಳ್ಳದ ಸ್ಥಿತಿ ಇನ್ನೂ ಜೀವಂತವಾಗಿದೆ. ಇಷ್ಟಾದರೂ ನಮ್ಮ ಸಮುದಾಯ ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಎಲ್ಲರೂ ಸಂಘಟಿತರಾಗಬೇಕು. ಹೋರಾಟದಿಂದಲೇ ನಾವು ಗುರಿಮುಟ್ಟಬೇಕು ಎಂದರು.
ಇತ್ತೀಚೆಗೆ ಬಡ್ತಿ ಮೀಸಲಾತಿ ಸಂಬಂಧ ಕಾನೂನು ತಂದು ಅದನ್ನು ಜಾರಿಗೆ ತರಲು ಏಳು ಬಾರಿ ಸಚಿವ ಸಂಪುಟಕ್ಕೆ ತಂದು, ಅಂತಿಮವಾಗಿ ಈ ಕಾಯಿದೆ ಕಾರ್ಯಗತ ಮಾಡಲು ಹೆಜ್ಜೆ ಇಟ್ಟೆವು. ಆದರೆ ಕೆಲ ಕಾಣದ ಕೈಗಳು ಈ ಕಾಯಿದೆಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.