ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ; ಶಾಸಕರ ಪುತ್ರನ ಹಲ್ಲೆ ಪ್ರಕರಣಕ್ಕೆ ಸಿಎಂ ಪ್ರತಿಕ್ರಿಯೆ
ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಶಾಸಕ ಹ್ಯಾರಿಸ್ ಪತ್ರನಿಂದ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಮಯ್ಯ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ಬೆಂಗಳೂರು ಪೊಲೀಸರು ಈ ಪ್ರಕರಣ ಸಂಬಂಧ ತನಿಖೆ ನಡೆಸಲಿದ್ದಾರೆ" ಎಂದು ಹೇಳಿದ್ದಾರೆ.
ಅಲ್ಲದೆ, ತಮ್ಮ ಪುತ್ರನ ಕೃತ್ಯಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಎನ್.ಎ. ಹ್ಯಾರಿಸ್ ತಮ್ಮ ಮಗನಿಗೆ ತಿಳಿ ಹೇಳುವುದಾಗಿ ತಿಳಿಸಿದ್ದಾರೆ.
"ಪುತ್ರ ಮೊಹಮದ್ ನಡವಳಿಕೆಯಿಂದ ನನಗೂ ತೀವ್ರ ನೋವಾಗಿದೆ. ಆತನ ವರ್ತನೆಯನ್ನು ನಾನೂ ಖಂಡಿಸುತ್ತೇನೆ. ಪುತ್ರ ನಳಪಾಡ್ ಗೂ ಬುದ್ದಿವಾದ ಹೇಳುತ್ತೇನೆ" ಎಂದು ಹ್ಯಾರಿಸ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಹ್ಯಾರಿಸ್ ಇಲ್ಲಿನ ಯುಬಿ ರೆಸ್ಟೋರೆಂಟ್ನಲ್ಲಿ ಶನಿವಾರ ರಾತ್ರಿ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಮೊಹಮ್ಮದ್ ಹ್ಯಾರಿಸ್ ನಳಪಾಡ್ ಮತ್ತು ಇತರ 10 ಮಂದಿ ವಿರುದ್ಧ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.