ಕಾಂಗ್ರೇಸ್ ಅನ್ನು ಕಿತ್ತೊಗೆದ ದಿನ ಕರ್ನಾಟಕದಲ್ಲಿ ಅಚ್ಚೇ ದಿನ್ ಬರಲಿದೆ- ಬಿಎಸ್ವೈ
ರೈತ ಮತ್ತು ನೇಕಾರ ನಮ್ಮ ಎರಡು ಕಣ್ಣುಗಳಿದ್ದಂತೆ- ಯಡಿಯೂರಪ್ಪ.
ಬಾದಾಮಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗಲು ಕೇಳುತ್ತಾರೆ, ಅಚ್ಚೇ ದಿನ್ ಎಲ್ಲಿ ಬಂದಿದೆ ಎಂದು. ಈಗಾಗಲೇ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಅಚ್ಚೇ ದಿನ್ ಬಂದಾಗಿದೆ. ಇನ್ನು ನಾಲ್ಕು ತಿಂಗಳು ಕಾಯಿರಿ, ಕಾಂಗ್ರೇಸ್ ಅನ್ನು ಕಿತ್ತೊಗೆದ ದಿನ ಕರ್ನಾಟಕದಲ್ಲಿ ಅಚ್ಚೇ ದಿನ್ ಬರಲಿದೆ ಎಂದು ಬಾದಾಮಿಯ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರೈತ ಮತ್ತು ನೇಕಾರ, ನಮ್ಮ 2 ಕಣ್ಣುಗಳಿದ್ದಂತೆ. ನನ್ನ ಆಡಳಿತದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ದೇಶದ ಮೊದಲ ರಾಜ್ಯ ನಮ್ಮದಾಗಿತ್ತು. ನಮ್ಮ ಸರ್ಕಾರ ಬಂದರೆ ನೇಕಾರರಿಗೆ ಒಂದು ವಿಶೇಷವಾದ ಯೋಜನೆ ನೀಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ನಮ್ಮದು ಎಂದು ನೇಕಾರರ ಸಮುದಾಯಕ್ಕೆ ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಹೆಂಗಸರು, ವೃದ್ಧರನ್ನೆಲ್ಲ ಬಲವಂತವಾಗಿ ಕರೆದುಕೊಂಡು ಬಂದಿದ್ದಾರೆ ಎಂಬ ಸುದ್ದಿ ಇದೆ. ಆದರೆ ಕಾರ್ಯಕ್ರಮಕ್ಕೆ ಇಷ್ಟು ಜನ ಬಂದು ಕಾಯುತ್ತಿರುವುದು ಹೊಸ ಪರಿವರ್ತನೆಗಾಗಿ ಎಂಬುದು ಸ್ಪಷ್ಟವಾಗುತ್ತದೆ ಎಂದು ಬಿಎಸ್ವೈ ಇದೇ ಸಂದರ್ಭದಲ್ಲಿ ತಿಳಿಸಿದರು.