ಬೆಂಗಳೂರು: ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು:


ಈಶ್ವರಪ್ಪ ಅವರು ನಿನ್ನೆವರೆಗೂ ಸುಳ್ಳು ಹೇಳಿಕೊಂಡಿದ್ದರು, ನಾವು ನಮ್ಮ ಹೋರಾಟವನ್ನು ಚುರುಕುಗೊಳಿಸಿದ ಮೇಲೆ ನಾಳೆ ಸಂಜೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮೃತ ಸಂತೋಷ್ ಪಾಟೀಲ್ ಅವರು ಈಶ್ವರಪ್ಪ ವಿರುದ್ಧ ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದರೆಂದು ಮಾಡಿದ ಆರೋಪವನ್ನು ಒಪ್ಪಿಕೊಂಡು, ತಪ್ಪಿನ ಅರಿವಾಗಿ ರಾಜೀನಾಮೆ ನೀಡುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ. 


ಮೊದಲಿಗೆ ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಯಾರೆಂದೇ ಗೊತ್ತಿಲ್ಲ ಎಂದು ಹೇಳುತ್ತಿದ್ದರು. ಸಂತೋಷ್ ಪಾಟೀಲ್ ಯಾರು ಅಂತಲೇ ಗೊತ್ತಿಲ್ಲದೆ ಆತನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರೇ? ಇದು ಮೊದಲ ಸಾಕ್ಷಿ.ಎರಡನೆಯದು ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ಹೇಳಿಕೆ ನೀಡಿ "ನಾನು ಮತ್ತು ಸಂತೋಷ್ ಪಾಟೀಲ್ ಅವರು ಎರಡು ಬಾರಿ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೆವು, ಸ್ವತಃ ಸಚಿವರೇ ಸಂತೋಷ್ ಪಾಟೀಲ್ ಗೆ ಕೆಲಸ ಮಾಡಲು ಹೇಳಿದ್ದರು, ಹಾಗಾಗಿ ಸಚಿವರ ಅನುಮತಿ ಮೇರೆಗೆ ಅವರು ಎಲ್ಲ ಕೆಲಸ ಪೂರ್ಣಗೊಳಿಸಿದ್ದಾರೆ" ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು. ಕೆಲಸ ಮಾಡಿದ ಮೇಲೆ ವರ್ಕ್ ಆರ್ಡರ್ ಮತ್ತು ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ 40% ಕಮಿಷನ್ ಗೆ ಬೇಡಿಕೆ ಇಟ್ಟಿದ್ದಾರೆ, ಅಷ್ಟು ಹಣ ಸಂತೋಷ್ ಪಾಟೀಲ್ ರಿಂದ ಕೊಡೋಕೆ ಸಾಧ್ಯವಾಗಿಲ್ಲ, ಈ ಕಾರಣಕ್ಕೆ ಬಿಲ್ ಹಣ ಬಿಡುಗಡೆ ಮಾಡದೆ ಕಿರುಕುಳ ನೀಡಿದ್ದಾರೆ. 


ಇದನ್ನೂ ಓದಿ: Kantara Teaser: ಕಾಂತಾರ ಟೀಸರ್‌ ರಿಲೀಸ್‌! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ?


ಹಲವು ಬಾರಿ ಹಣ ಬಿಡುಗಡೆ ಮಾಡುವಂತೆ ಸಂತೋಷ್ ಪಾಟೀಲ್ ಗೋಗರೆದಿದ್ದಾರೆ, ಎಷ್ಟೇ ಮನವಿ ಮಾಡಿದ್ರು ಸಚಿವರು ಸ್ಪಂದಿಸದೆ ಇದ್ದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದಕ್ಕೆ ಸಾಕ್ಷಿಯಾಗಿ ಸಂತೋಷ್ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಬರೆದ ಪತ್ರವಿದೆ. ಜೊತೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಮಾಡಿ ಮನವಿ ಮಾಡಿದ್ದಾರೆ. ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ನಾನು ಕಾಮಗಾರಿ ಕೆಲಸ ಮಾಡಲು ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ, ಈಗ ಬಿಲ್ ಹಣ ಪಾವತಿಸದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆತ್ಮಹತ್ಯೆಗೆ ಈಶ್ವರಪ್ಪ ಕಾರಣ ಎಂದು ಹೇಳಲು ಇದಕ್ಕಿಂತ ಸಾಕ್ಷಿ ಬೇಕ?


ಈಶ್ವರಪ್ಪ ಅವರೇ ಸಂತೋಷ್ ಪಾಟೀಲ್ ಸಾವಿಗೆ ಕಾರಣ ಎಂದು ಆತನ ಹೆಂಡತಿ ಮತ್ತು ತಾಯಿ ಹೇಳಿದ್ದಾರೆ. ಸಂತೋಷ್ ಪಾಟೀಲ್ ಅವರಿಗೆ ಈಶ್ವರಪ್ಪ ನೀಡುತ್ತಿದ್ದ ಕಿರುಕುಳ, 40% ಕಮಿಷನ್ ಕೇಳಿದ್ದು, ಬಿಲ್ ಬಿಡುಗಡೆ ಮಾಡದೆ ಸತಾಯಿಸುತ್ತ ಇದ್ದದ್ದು ಎಲ್ಲವನ್ನು ತನ್ನ ತಾಯಿ ಮತ್ತು ಹೆಂಡತಿ ಬಳಿ ಹೇಳಿಕೊಂಡಿದ್ದರು. ಈಗ ಮೃತನ ತಾಯಿ ಮತ್ತು ಹೆಂಡತಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.


ಸಂತೋಷ್ ಪಾಟೀಲ್ ಸಾಯುವ ಮುನ್ನ ತನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ವಾಟ್ಸಾಪ್ ಮೂಲಕ ಡೆತ್ ನೋಟ್ ಕಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳು ಈಶ್ವರಪ್ಪ ಅಪರಾಧಿ ಎಂದು ತೋರಿಸುತ್ತಿವೆ. ಮೃತನ ಸಹೋದರ ನೀಡಿರುವ ದೂರಿನಲ್ಲಿ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ‌. 


ಈಶ್ವರಪ್ಪ ರಾಜೀನಾಮೆ ನಮ್ಮ ಹೋರಾಟದ ಮುಖ್ಯ ಉದ್ದೇಶವಲ್ಲ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ -13 ರಡಿ ಪ್ರಕರಣ ದಾಖಲು ಮಾಡಬೇಕು, ಈಗ ಅವರ ಮೇಲೆ ಸೆಕ್ಷನ್ 306, ಸೆಕ್ಷನ್ 34 ರಡಿ ಕೇಸ್ ದಾಖಲಾಗಿದೆ. ಇದರಲ್ಲಿ ಈಶ್ವರಪ್ಪ ಅವರೇ ಮೊದಲ ಆರೋಪಿ ಆಗಿದ್ದಾರೆ. ಇದೊಂದು ಅಮಾನವೀಯ ಅಪರಾಧ, ಇಂತಹಾ ಅಪರಾಧ ಪ್ರಕರಣಗಳಲ್ಲಿ ಅಪರಾಧಿ ಸಿಕ್ಕ ಕೂಡಲೆ ಬಂಧನ ಮಾಡಬೇಕು ಎಂದು ಕಾನೂನು ಹೇಳುತ್ತದೆ, ಹಾಗಾಗಿ ಈ ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಬೇಕು. ಕಾನೂನು ಎಲ್ಲರಿಗೂ ಒಂದೆ ಅಲ್ಲವೇ? ಇವು ನಮ್ಮ ಮುಖ್ಯ ಬೇಡಿಕೆಗಳು.


ಇವುಗಳ ಜೊತೆಗೆ ಸಂತೋಷ್ ಕುಟುಂಬಸ್ಥರಿಗೆ ರೂ. 1 ಕೋಟಿ ಪರಿಹಾರ ನೀಡಬೇಕು, ಮೃತನ ಪತ್ನಿ ಬಿ.ಎ ಪಧವೀದರೆ ಆಗಿರುವುದರಿಂದ ಆಕೆಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಇದನ್ನು ನಿನ್ನೆ ಸಂತೋಷ್ ಪಾಟೀಲ್ ನಿವಾಸಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದೇವೆ. ನಾವು ಪಕ್ಷದ ವತಿಯಿಂದ ಮೃತನ ಕುಟುಂಬಕ್ಕೆ ಏನು ಪರಿಹಾರ ಘೋಷಣೆ ಮಾಡಿದ್ದೇವೆ ಅದನ್ನು ಕೊಡುತ್ತೇವೆ. 


ಸರ್ಕಾರ ನಮ್ಮ ಒತ್ತಾಯಗಳನ್ನು ಈಡೇರಿಸದೆ, ಈ ನೆಲದ ಕಾನೂನಿಗೆ ಗೌರವ ಕೊಡದೆ ಭ್ರಷ್ಟಾಚಾರವನ್ನು ಬೆಂಬಲಿಸುವ ಕೆಲಸ ಮುಖ್ಯಮಂತ್ರಿಗಳಿಂದ ಆಗುತ್ತಿದೆ. ಮುಖ್ಯಮಂತ್ರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ನಮ್ಮ ಆರೋಪ, ಕಾರಣ ಈ ಇಡೀ ಸರ್ಕಾರದ ಮೇಲೆಯೇ 40% ಕಮಿಷನ್ ಆರೋಪ ಇದೆ. 


ಈ ಆತ್ಮಹತ್ಯೆ ಪ್ರಕರಣವು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಬೇಕು. 
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಈ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ್ದಾರೆ. ಅದು ಕೂಡ ನ್ಯಾಯಾಂಗ ತನಿಖೆಯಾಗಬೇಕು. ಇದನ್ನು ಬಹಳ ಹಿಂದಿನಿಂದಲೂ ಒತ್ತಾಯ ಮಾಡುತ್ತಾ ಬಂದಿದ್ದೇವೆ, ಈಗಲೂ ಒತ್ತಾಯ ಮಾಡುತ್ತೇವೆ. 


ನಮ್ಮ ಈ ಎಲ್ಲಾ ಆಗ್ರಹಗಳು ಇನ್ನೂ ಈಡೇರಿಲ್ಲ, ಹಾಗಾಗಿ ನಾವು ನಿರ್ಧಾರ ಮಾಡಿದಂತೆ 24 ಗಂಟೆಗಳ ಕಾಲ ಧರಣಿಯನ್ನು ಮುಂದುವರೆಸುತ್ತೇವೆ. ಈಗಾಗಲೇ ನಮ್ಮ ಪಕ್ಷದ ಹಲವು ನಾಯಕರ ನೇತೃತ್ವದಲ್ಲಿ ಏಳು ತಂಡಗಳನ್ನು ರಚನೆ ಮಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡುವ ನಿರ್ಧಾರ ಮಾಡಿದ್ದೇವೆ, ಅದನ್ನು ಕೂಡ ಮಾಡುತ್ತೇವೆ. 


ಇದನ್ನೂ ಓದಿ:Shehbaz Sharif on India: ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಶಹಬಾಜ್ ಷರೀಫ್


ನಿನ್ನೆವರೆಗೂ ನಾನು ಯಾವುದಕ್ಕೂ ಬಗ್ಗಲ್ಲ, ಜಗ್ಗಲ್ಲ ಎನ್ನುತ್ತಿದ್ದ ಈಶ್ವರಪ್ಪ ಇಂದು ರಾಜೀನಾಮೆ ಘೋಷಣೆ ಮಾಡಿದ್ದಾರೆ. ಮೊದಲಿಂದಲೂ ನಾನು ಈಶ್ವರಪ್ಪ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈಗ ಅವರು ಅಮಾನವೀಯ ಅಪರಾಧ ಎಸಗಿರುವ ಆರೋಪಿ ಬೇರೆ.


ಭಾರತೀಯ ಸಾಕ್ಷ್ಯ ಕಾಯ್ದೆಯಡಿ ಆರೋಪಿ ನಂಬರ್ 1 ಆಗಿರುವ ಈಶ್ವರಪ್ಪ ಅವರು ನೀಡುವ ಯಾವ ಹೇಳಿಕೆಗಳು ಕಾನೂನಿನಡಿ ಮಹತ್ವ ಪಡೆದಿಲ್ಲ ಮತ್ತು ಅಪರಾಧ ಕೃತ್ಯದ ಸ್ಪಷ್ಟೀಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ, ದೇಶ, ವ್ಯವಸ್ಥೆ ಉಳಿಯಬೇಕಾದರೆ ಮಾಧ್ಯಮಗಳ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲಾ ಮಾಧ್ಯಮಗಳು ನಮ್ಮೊಂದಿಗೆ ನಿಂತು ಪ್ರಜಾಪ್ರಭುತ್ವವನ್ನು ಉಳಿಸಲು ಸಹಕಾರ ನೀಡುತ್ತಿವೆ ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.