ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿದ ‘ಆಪರೇಷನ್ ಆಡಿಯೋ’ ಸದನದಲ್ಲಿಂದು ಬಾರೀ ಚರ್ಚೆಗೆ ಗ್ರಾಸವಾಯಿತು. ವಿಧಾನಮಂಡಲದ ಕಲಾಪದಲ್ಲಿ ಗಂಭೀರ ಚರ್ಚೆಯನ್ನು ಆಲಿಸಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು 15 ದಿನದೊಳಗೆ ವಿಶೇಷ ತನಿಖಾ ತಂಡ ರಚಿಸಿ ವರದಿ ನೀಡುವಂತೆ ಆದೇಶ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಗಂಭೀರ ಚರ್ಚೆಗೆ ಸಾಕ್ಷಿಯಾದ ಕಲಾಪ:
ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಜೊತೆ ನಡೆದಿದೆ ಎನ್ನಲಾದ ಸಂಭಾಷಣೆ ವಿಚಾರ ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೆ ಸಾಕ್ಷಿಯಾಯಿತು. ಬಿಜೆಪಿಯ ಮಾಧುಸ್ವಾಮಿ, ಕಾಂಗ್ರೆಸ್ ಪಕ್ಷದ ಕೃಷ್ಣಬೈರೇಗೌಡ, ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್, ಬಿಜೆಪಿಯ ಕೆಎಸ್ ಈಶ್ವರಪ್ಪ, ಸುರೇಶ್ ಕುಮಾರ್, ಶಾಸಕ ರಾಜೀವ್ ಕುಡಚಿ, ಗೋವಿಂದ ಕಾರಜೋಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.


ಆಡಿಯೋದಲ್ಲಿ ಸ್ಪೀಕರ್ ಮತ್ತು ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ನ್ಯಾಯಾಧೀಶರ ಬಗ್ಗೆ ಉಲ್ಲೇಖ ಇರುವುದರಿಂದ ಇದು ಸದನದ ಹಕ್ಕುಚ್ಯುತಿ, ಸ್ಪೀಕರ್ ಅವರ ಹಕ್ಕುಚ್ಯುತಿ ಜೊತೆಗೆ ನಿಂದನೆ ಕೂಡ ಎಂಬುದು ಕಾನೂನು ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯವಾಗಿತ್ತು. ಸ್ಪೀಕರ್​ ಕುರಿತು ಹಗುರವಾಗಿ ಮಾತನಾಡಿರುವರಿಗೆ ಒಂದು ಪಾಠವಾಗಬೇಕು ಎಂದು ಶಾಸಕರು ಆಗ್ರಹಿಸಿದರು.


ಶಾಸಕರ ಒತ್ತಾಯದ ಹಿನ್ನಲೆ ಹಾಗೂ ತಮ್ಮ ಬಗ್ಗೆ ಈ ರೀತಿ ಮಾತನಾಡಿದವರು ಯಾರು ಎಂಬುದು ತಿಳಿಯಲು ತನಿಖೆ ನಡೆಯಲೇಬೇಕು ಎಂದು ಸ್ಪೀಕರ್​ ಕೂಡ ಸಹಮತ ಸೂಚಿಸಿದರು. ಇದಕ್ಕಾಗಿ  ತನಿಖೆಗೆ ವಿಶೇಷ ತಂಡ ರಚಿಸುವಂತೆ ಮುಖ್ಯಮಂತ್ರಿಗೆ ಕೇಳಿಕೊಂಡರು. ಇದಕ್ಕೆ ಒಪ್ಪಿಕೊಂಡ ಕುಮಾರಸ್ವಾಮಿ, ವಿಶೇಷ ತನಿಖಾ ತಂಡದ ಮೂಲಕ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದರು.


ತನಿಖೆಗೆ ಬಿಜೆಪಿ ಆಕ್ಷೇಪ:
ಎಸ್​ಐಟಿ ತನಿಖೆಗೆ ಮುಂದಾಗುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಂತೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಜೆ.ಸಿ. ಮಾಧುಸ್ವಾಮಿ, ನಿಮ್ಮ ತನಿಖೆ ಮೇಲೆ ನಮಗೆ ವಿಶ್ವಾಸವಿಲ್ಲ. ಈ ಬಗ್ಗೆ ಸಭಾಧ್ಯಕ್ಷರೆ ಪಕ್ಷಾತೀತವಾಗಿ ಸಮಿತಿಯೊಂದನ್ನು ರಚಿಸಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು. 


ಇದೇ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಭಾಧ್ಯಕ್ಷರು ತಮ್ಮ ವಿವೇಚನಾ ಅನ್ವಯ ಯಾವುದೇ ಸಮಿತಿ ರಚಿಸಿ ತನಿಖೆ ನಡೆಸಿದರೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.


ಅದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್, ಯಾರು ತನಿಖೆ ನಡೆಸಬೇಕು ಎಂದು ನಾನು ಆದೇಶ ಮಾಡಲು ಆಗುವುದಿಲ್ಲ. ಸಮಿತಿ ಒಳಗೆ ಮಾತ್ರ ತನಿಖೆ ನಡೆಸಬಹುದು. ಸರ್ಕಾರದ ಮೇಲೆ ನಂಬಿಕೆ ಇಲ್ಲ, ಎಸ್‌ಐಟಿಯ ತನಿಖೆ ಬೇಡ ಎಂದು ಹೇಳುತ್ತೀರಿ. ಸತ್ಯ ಸ್ಥಾಪನೆ ಮಾಡುವ ವಿಚಾರ ಇರಬೇಕು. ತನಿಖೆ ನಡೆಸುವ ಅಧಿಕಾರಿಗಳು ನಿಮ್ಮ ಸೇವಕರಲ್ಲ. ಅವರು ಸಾರ್ವಜನಿಕರ ಸೇವಕರು ಎಂದು ಬಿಜೆಪಿಯವರಿಗೆ ಹೇಳಿದರು.