ಬೆಂಗಳೂರು: “ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀಟರ್ ಸ್ಕೈಡೆಕ್ ನಿರ್ಮಿಸಲು ಮುಂದಾಗಿದ್ದು, ವಿರೋಧ ಪಕ್ಷಗಳ ನಾಯಕರು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಶಾಸಕರ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.


COMMERCIAL BREAK
SCROLL TO CONTINUE READING

“250 ಮೀಟರ್ ಎತ್ತರದ ಈ ಸ್ಕೈಡೆಕ್‌ಗಾಗಿ 25 ಎಕರೆ ಜಾಗದ ಅಗತ್ಯವಿದೆ. ಕೊಮ್ಮಘಟ್ಟ ಹಾಗೂ ಬೆಂಗಳೂರು ವಿವಿ ಬಳಿಯ ಜಾಗವನ್ನು ನೋಡಿದ್ದೆವು. ಬೆಂಗಳೂರು ಬೆಳೆಯುತ್ತಿರುವಾಗ ಬೆಂಗಳೂರು ವಿವಿಯ ಬಳಿ 25 ಎಕರೆ ಭೂಮಿ ವ್ಯರ್ಥ ಮಾಡುವುದು ಬೇಡ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಶಾಸಕರು ಅಭಿಪ್ರಾಯಪಟ್ಟರು. ಹೀಗಾಗಿ ಈಗ ನೈಸ್ ರಸ್ತೆಯ ಬಳಿ ಮಾಡಲು ವಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲಾ ಶಾಸಕರು ಒಪ್ಪಿದ್ದಾರೆ ಎಂದು ತಿಳಿಸಿದರು.


ಇದನ್ನೂ ಓದಿ: ನಟ ದರ್ಶನ್‌ ಜೊತೆ ರಾಜಿ ಆಗುತ್ತಾ ಚಿತ್ರದುರ್ಗದ ರೇಣುಕಾಸ್ವಾಮಿ ಫ್ಯಾಮಿಲಿ?


ʼಈ ಜಾಗ ನೈಸ್ ಸಂಸ್ಥೆ ಬಳಿ ಇದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಸರ್ಕಾರಕ್ಕೆ ನೈಸ್ ಸಂಸ್ಥೆ 200 ಎಕರೆ ಭೂಮಿ ವಾಪಸ್ ನೀಡಬೇಕಿದೆ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ನೈಸ್ ಸಂಸ್ಥೆ ಬಳಿ ಚರ್ಚೆ ಮಾಡುತ್ತೇವೆ. ಈ ಯೋಜನೆಗಾಗಿ 10 ಜಾಗ ಹುಡುಕಲಾಗಿತ್ತು. ಆದರೆ ವಾಯುಸೇನೆ, ವಿಮಾನಯಾನ ಸಚಿವಾಲಯದವರು 20KM ವ್ಯಾಪ್ತಿಯಲ್ಲಿ ಈ ಯೋಜನೆ ಮಾಡಲು ಅವಕಾಶವಿಲ್ಲವೆಂದು ಹೇಳಿದ್ದರು. ಹೀಗಾಗಿ ನೈಸ್ ರಸ್ತೆ ಬಳಿ ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಡಿಕೆಶಿ ತಿಳಿಸಿದರು.


ಸ್ಕೈಡೆಕ್ ಅನ್ನು ನಗರದ ಹೊರ ಭಾಗಕ್ಕೆ ತೆಗೆದುಕೊಂದು ಹೋದರೆ ಅದರ ಉದ್ದೇಶ ಈಡೇರುವುದೇ ಎಂದು ಮಾಧ್ಯಮಗಳು ಕೇಳಿದಾಗ, “ಎಲ್ಲಾ ರೀತಿಯ ಲೆಕ್ಕಾಚಾರವನ್ನು ನಾವು ಹಾಕಿಯೇ ಈ ತೀರ್ಮಾನ ಮಾಡಿದ್ದೇವೆ. ನೈಸ್ ರಸ್ತೆ ಬಳಿ ಮಾಡುವುದರಿಂದ ಪ್ರವಾಸಿಗರು ಮೈಸೂರು, ಕೊಡಗು ಭಾಗಕ್ಕೆ ತೆರಳಲು ಮುಕ್ತವಾದ ಸಂಚಾರ ಮಾರ್ಗವಿರುತ್ತದೆ. ಇನ್ನು ನೈಸ್ ರಸ್ತೆ ಅಗಲೀಕರಣಕ್ಕೂ ಅವಕಾಶ ಇರುವುದರಿಂದ ಇದು ಸೂಕ್ತ ಜಾಗವೆಂದು ಅಶೋಕ್ ಅವರು ಸಲಹೆ ನೀಡಿದ್ದಾರೆ. ಅವರ ಸಲಹೆಯಲ್ಲೂ ಅರ್ಥವಿದೆ. ಪೆರಿಫೆರಲ್ ರಿಂಗ್ ರಸ್ತೆ ಮಾಡಿದಾಗ ಎಲ್ಲಾ ಭಾಗಗಳಿಂದಲೂ ಇಲ್ಲಿಗೆ ಸಂಪರ್ಕ ಸಾಧಿಸಬಹುದು. ಇವರ ಸಲಹೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು” ಎಂದರು.


“ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಮೆಟ್ರೋ ಸಂಪರ್ಕ ಮಾಡಬೇಕಿದೆ. ಇದಕ್ಕೆ ಆರ್ಥಿಕ ಹೊರೆ ಇದ್ದು, ಈ ಭಾಗದಲ್ಲಿ ಅಭಿವೃದ್ಧಿ ಕಡಿಮೆ ಇರುವ ಕಾರಣ ಭೂಮಿ ವಶಕ್ಕೆ ಪಡೆಯಲು ಕಡಿಮೆ ವೆಚ್ಚವಾಗಲಿದೆ ಎಂದು ಈ ಸಲಹೆ ನೀಡಲಾಗಿದೆ. ಆರ್ಥಿಕವಾಗಿ ಎಲ್ಲಿ ನಮಗೆ ಅನುಕೂಲವಾಗುತ್ತದೆ ಎಂದು ಪರಿಶೀಲಿಸಲಾಗುವುದು. ಇದನ್ನು ಸರ್ಕಾರದಿಂದಲೇ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು” ಎಂದು ತಿಳಿಸಿದರು.


ಸುರಂಗ ರಸ್ತೆ


“ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಮೊದಲು ಎಸ್ಟೀಮ್‌ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ 18.5KM ಉದ್ದದ ಟನಲ್ ರಸ್ತೆ ಮಾಡಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಟೆಂಡರ್ ಕರೆಯಲಾಗುವುದು. ಈ ರಸ್ತೆ ನಿರ್ಮಾಣದ ವೇಳೆ ಕೆಲವು ಜಾಗಗಳನ್ನು ವಶಕ್ಕೆ ಪಡೆಯಬೇಕಾಗುತ್ತದೆ. ಈ ಎಲ್ಲಾ ವಿಚಾರವಾಗಿ ಶಾಸಕರ ಮುಂದೆ ಪ್ರಸ್ತಾಪ ಮಾಡಿದ್ದು, ಶಾಸಕರು ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಬೆಂಗಳೂರಿನ ಪೂರ್ವದಿಂದ ಪಶ್ಚಿಮಕ್ಕೆ ಒಂದು ಮಾರ್ಗ ಸಿದ್ಧ ಮಾಡಲಾಗಿದ್ದು, ಮುಂದಿನ ಹಂತಗಳಲ್ಲಿ ತೆಗೆದುಕೊಳ್ಳಲಾಗುವುದು.


ಇನ್ನು ಮುಂದಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಮೆಟ್ರೋ ಮಾರ್ಗಗಳನ್ನು ಡಬಲ್ ಡೆಕ್ಕರ್ ಮೇಲ್ಸೆತುವೆ ಮಾಡಲಾಗುವುದು. ಪಾಲಿಕೆ ಹಾಗೂ ಮೆಟ್ರೋ ಎರಡೂ ಇಲಾಖೆಗಳು ಇದರ ವೆಚ್ಚವನ್ನು ಭರಿಸಲಿವೆ. ಟನಲ್ ರಸ್ತೆ ಜೊತೆಗೆ 17-18 ಕಡೆಗಳಲ್ಲಿ ಜಾಗ ಹುಡುಕಿದ್ದು, ಸದ್ಯಕ್ಕೆ 100KMನಷ್ಟು ಸಿಗ್ನಲ್ ಮುಕ್ತ ಕಾರಿಡಾರ್ ಮೇಲ್ಸೆತುವೆ ಮಾಡಲು ಮುಂದಾಗಿದ್ದು, ಇದಕ್ಕಾಗಿ 12 ಸಾವಿರ ಕೋಟಿಯಷ್ಟು ವೆಚ್ಚ ತಗುಲಲಿದೆ. ಇದಕ್ಕಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.


ನಗರದ ಹೊರಗೆ ಕಸ ವಿಲೇವಾರಿ


“ಇನ್ನು ಕಸ ವಿಲೇವಾರಿಗೆ ಬೆಂಗಳೂರಿನ ಹೊರಭಾಗದ 15-20KM ದೂರ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಜಾಗ ಗುರುತಿಸಿ ಅಲ್ಲಿ ಕಸ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಜಾಗ ಇದ್ದಲ್ಲಿ ಅದನ್ನು ಬಳಸಲಾಗುವುದು. ಇಲ್ಲವಾದರೆ ಖಾಸಗಿ ಜಮೀನುಗಳನ್ನು ಆಯುಕ್ತರು ಖರೀದಿ ಮಾಡಲಿದ್ದಾರೆ. ಕೇಂದ್ರ ಪರಿಸರ ಇಲಾಖೆ ನಿಯಮಾನುಸಾರ ಇದನ್ನು ಮಾಡಲಾಗುವುದು. ಸಂಚಾರಿ ದಟ್ಟಣೆ ವಿಚಾರವಾಗಿ ಹಳೇ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿರುವುದರ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಆಯ್ಕೆ ನೀಡಲಾಗಿದ್ದು, ಇಂತಹ ಗಾಡಿಗಳನ್ನು ಅವರು ತೆಗೆದುಕೊಂಡು ಯಾರ್ಡ್‌ಗಳಿಗೆ ಹಾಕಿ ಹರಾಜು ಮಾಡಲು ಅವಕಾಶ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.


ಇದನ್ನೂ ಓದಿ: Karnataka Rains: ಕರ್ನಾಟಕಕ್ಕೆ ಜಲ ಕಂಟಕ.. ಈ ಜಿಲ್ಲೆಗಳಲ್ಲಿ ರಣಭೀಕರ ಮಳೆ, ಬಿರುಗಾಳಿ ಗುಡುಗು ಮಿಂಚು ಸಹಿತ ವರುಣಾರ್ಭಟದ ಎಚ್ಚರಿಕೆ!


ಆಗಸ್ಟ್ 20ರ ವೇಳೆಗೆ ಕಾವೇರಿ 5ನೇ ಹಂತಕ್ಕೆ ಚಾಲನೆ


“ಕಾವೇರಿ 5ನೇ ಹಂತದ ನೀರು ಪೂರೈಕೆ ಯೋಜನೆ ಪ್ರಯೋಗ ಹಂತದಲ್ಲಿದೆ. ಆಗಸ್ಟ್ 15ರಂದು ಇದಕ್ಕೆ ಚಾಲನೆ ನೀಡಲು ತೀರ್ಮಾನಿಸಿದ್ದೆ. ಆದರೆ ಅಧಿಕಾರಿಗಳು ಇನ್ನು ಐದಾರು ದಿನ ಸಮಯಾವಕಾಶ ಕೇಳುತ್ತಿದ್ದು, ಆಗಸ್ಟ್ 20ರ ವೇಳೆಗೆ ನೀರು ನೀಡಲಾಗುವುದು” ಎಂದರು.


ವಿಶೇಷ ಅನುದಾನಕ್ಕೆ ಬೇಡಿಕೆ


ಇದೆಲ್ಲದರ ಜೊತೆಗೆ ಬೆಂಗಳೂರಿನ ಶಾಸಕರು ವಿಶೇಷ ಅನುದಾನಗಳನ್ನು ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಜೊತೆ ಚರ್ಚೆ ಮಾಡಿ ಎಷ್ಟು ಅನುದಾನ ನೀಡಲು ಸಾಧ್ಯವೋ ಅದನ್ನು ನೀಡುತ್ತೇವೆ. ಇಂದಿನ ಸಭೆಯಲ್ಲಿ ಎಲ್ಲರೂ ಉತ್ತಮವಾದ ಸಲಹೆಗಳನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಹಳ ಅನುಭವದ ಶಾಸಕರಿದ್ದು, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಬಿಚ್ಚುಮನಸ್ಸಿನಿಂದ ಸಲಹೆ ನೀಡಿದ್ದಾರೆ. ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ಚರ್ಚೆಯಾಗಿದೆ. ಇನ್ನು ಗ್ರೇಟರ್ ಬೆಂಗಳೂರು ವಿಧೇಯಕ ವಿಚಾರವಾಗಿ ಎಲ್ಲಾ ಪಕ್ಷದ ಶಾಸಕರು ಸದನ ಸಮಿತಿ ರಚನೆಗೆ ಮನವಿ ಮಾಡಿದ ಕಾರಣ ಸಮಿತಿ ರಚನೆಗೆ ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕರು ಅವರ ಪಕ್ಷದ ಶಾಸಕರ ಹೆಸರನ್ನು ಎಷ್ಟು ಬೇಗ ನೀಡುತ್ತಾರೋ ಅಷ್ಟು ಬೇಗ ಸಮಿತಿ ರಚನೆ ಮಾಡಲಾಗುವುದು ಎಂದು ಡಿಕೆಶಿ ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.