ಬೆಂಗಳೂರು:  ರಾಜ್ಯದಲ್ಲಿ ಪ್ರವಾಹದಿಂದ 10 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಹೆದರುವ ರಾಜ್ಯ ಬಿಜೆಪಿ ನಾಯಕರು ಕೇವಲ 450 ಕೋಟಿ ರೂಪಾಯಿ ಮಾತ್ರ ಪರಿಹಾರಕ್ಕೆ ಮನವಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ (Eshwar Khandre) ಮತ್ತು ಶಾಸಕ ಪ್ರಿಯಾಂಕಾ ಖರ್ಗೆ (Priyank Kharge) ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಬಳಿ ಪ್ರವಾಹ ಪರಿಹಾರ ಕೇಳದ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ಜನ 25 ಜನ ಬಿಜೆಪಿ ಸಂಸದರನ್ನು ಆರಿಸಿದ್ದಾರೆ. ಆದರೆ ಯಾರೊಬ್ಬರೂ ಪ್ರವಾಹ ಪರಿಹಾರಕ್ಕಾಗಿ ಪ್ರಧಾನಿಯವರ ಮೇಲೆ ಒತ್ತಡ ಏರಿಲ್ಲ. ಇವರೆಲ್ಲಾ ಅಂಜುಬುರುಕರು ಎಂದು ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.


ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B.S. Yadiyurappa) ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಯಾವುದೇ ರೀತಿಯ ಪರಿಹಾರ ಘೋಷಣೆ ಮಾಡಿಲ್ಲ. 14 ಸಾವಿರ ಮಂದಿಗೆ ಪರಿಹಾರವೇ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಕೂಡಲೇ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕೊಂಡೊಯ್ಯಲಿ ಎಂದು ಆಗ್ರಹಿಸಿದರು.


ಕೇಂದ್ರದಲ್ಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರು ತಕ್ಷಣ 5 ಸಾವಿರ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕು. ಅವರು ಈವರೆಗೆ ರಾಜ್ಯಕ್ಕೆ ಯಾವುದೇ ನೆರವು ನೀಡಿಲ್ಲ ಎಂದು ಹೇಳಿದರು.


ರಾಜ್ಯದ 56 ತಾಲ್ಲೂಕು,1,000ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಬಿಸಿ ತಟ್ಟಿದೆ. 3,000 ಮನೆ ಕುಸಿತವಾಗಿವೆ. 80,000 ಹೆಕ್ಟೇರ್ ಬೆಲೆ ನಾಶವಾಗಿದೆ. 3,500 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 365 ಕಟ್ಟಡ 250 ಸೇತುವೆ ಪ್ರವಾಹದಿಂದ ಕುಸಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಹೋದ ವರ್ಷ ಬಂದ ನೆರೆಗೂ ಜನ ತತ್ತರಿಸಿ ಹೋಗಿದ್ದರು. ಆ ಸಂದರ್ಭದಲ್ಲಿ ಸಹ ಜನ ರಕ್ಷಣೆ ಗೆ ಬರುವಲ್ಲಿ ರಾಜ್ಯ ಬಿಜೆಪಿ  ಸರ್ಕಾರ ವಿಫಲವಾಯಿತು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಹ ಜನರ ರಕ್ಷಣೆಗೆ ಬರಲಿಲ್ಲ ಎಂದು ಕಿಡಿಕಾರಿದರು.


ಚುನಾವಣೆ ಸಮಯದಲ್ಲಿ ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತ ಹೇಳಿದ್ದರು. ಆದ್ರೆ  ಕೇಂದ್ರ ಸರ್ಕಾರ ಜನರ ಸಂಕಷ್ಟಗಳಿಗೆ ಮಾತ್ರ  ಸ್ಪಂದಿಸುತ್ತಿಲ್ಲ. ಕಳೆದ ಬಾರಿ ಸೌಜನ್ಯಕ್ಕೂ ರಾಜ್ಯದ ನೆರೆ ಅಧ್ಯಯನಕ್ಕೆ ಪಿಎಂ ಮೋದಿ ಬರಲಿಲ್ಲ. ಕಳೆದ ವರ್ಷ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಎಷ್ಟು ಮನೆ ಕಟ್ಟಿ ಕೊಟ್ಟಿದೆ? ಎಂದು ಪ್ರಶ್ನಿಸಿದರು.