ಮಹದಾಯಿ ವಿವಾದ : ಜನವರಿ 27ಕ್ಕೆ ಬೆಂಗಳೂರು ಬಂದ್
ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಮುನ್ನ ದಿನವಾದ ಜನವರಿ 27ರಂದು ಬೃಹತ್ ಪ್ರತಿಭಟನೆ ಮತ್ತು ಬಂದ್ ಹಮ್ಮಿಕೊಳ್ಳುತ್ತಿರುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ವಿವಾದವನ್ನು ಕೂಡಲೇ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಇದೇ ಜನವರಿ 27 ರಂದು ಬೆಂಗಳೂರು ಬಂದ್ ಗೆ ಕರೆ ನೀಡಿವೆ.
ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಮುನ್ನ ದಿನವಾದ ಜನವರಿ 27ರಂದು ಬೃಹತ್ ಪ್ರತಿಭಟನೆ ಮತ್ತು ಬಂದ್ ಹಮ್ಮಿಕೊಳ್ಳುತ್ತಿರುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಹೋರಾಟ ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಳ್ಳಲಿದ್ದು, ಎಲ್ಲಾ ಕನ್ನಡ ಸಂಘಟನೆಯವರಿಗೆ ಕರೆ ಕೊಟ್ಟಿದ್ದೇನೆ. ಕನ್ನಡಿಗರ ಶಕ್ತಿ ಪ್ರದರ್ಶನ ಏನೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿಕೊಡಲಿದ್ದೇವೆ ಎಂದು ಹೇಳಿದರು.
ಅಂದು ಬೆಳಿಗ್ಗೆ ಬೆಳಗ್ಗೆ 6ರಿಂದ ಸಂಜೆ 6ರ ತನಕ ಬಂದ್ ಹಾಗೂ ಹೋರಾಟ ನಡೆಯಲಿದ್ದು, ಕರ್ನಾಟಕ ಸರ್ಕಾರವೂ ನಮ್ಮ ಬಂದ್ ಗೆ ಬೆಂಬಲ ಕೊಡಬೇಕು. ಇನ್ನು ಮಂಗಳೂರು, ಉಡುಪಿ ಜನರು ನಮ್ಮ ಮೇಲಿನ ಮುನಿಸು ಬಿಟ್ಟು ದಯವಿಟ್ಟು ಈ ಬಾರಿಯ ಹೋರಾಟಕ್ಕೆ ಬೆಂಬಲ ಕೊಡಿ. ಈ ಬಾರಿಯ ಕನ್ನಡಿಗರ ಶಕ್ತಿ ಮೋದಿ ಅವರಿಗೆ ತಲುಪಲೇಬೇಕು ಎಂದು ವಾಟಾಳ್ ಮನವಿ ಮಾಡಿದರು.
ಇನ್ನು ಈ ಸಂಬಂಧ ಚಿತ್ರ ಪ್ರದರ್ಶನ ಚಿತ್ರೀಕರಣ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದ್ ಹೇಳಿದರು.
ಬಿಜೆಪಿಯ 75 ದಿನಗಳ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ನವೆಂಬರ್ 2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಚಾಲನೆ ನೀಡಿದ್ದರು. ಯಾತ್ರೆಯ ಸಮಾರೋಪ ಸಮಾರಂಭ ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.