ನವದೆಹಲಿ: ಸಿದ್ದರಾಮಯ್ಯ ಸಿಎಂ ಆಗುತ್ತೇನೆ ಎನ್ನುವುದರಲ್ಲಿ ತಪ್ಪೇನು? ಅದನ್ನು ಬೇರೆ ರೀತಿ ಅರ್ಥೈಸುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಮ್ಮಿಶ್ರ ಸರ್ಕಾರ ರಚನೆಯಾಗಿ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರವನ್ನು ರಚನೆ ಮಾಡಿ ಇಂದಿಗೆ ನೂರು ದಿನ ತುಂಬಿದೆ. ರಾಜ್ಯದ ಮೈತ್ರಿ ಸರ್ಕಾರ ನೂರು ದಿನ ಪೂರೈಸಿದೆ. ಮೊದಲನೆಯದಾಗಿ ನಾಡಿನ ಜನತೆಗೆ ನನ್ನ ಕೃತಜ್ಞತೆ ತಿಳಿಸುತ್ತೇನೆ. ನಾಡಿನ ಜನತೆಯ ನಿರೀಕ್ಷೆ ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಗುರಿ ಹೊಂದಿದ್ದೇನೆ ಎಂದರು.


ಈ ನೂರು ದಿನಗಳಲ್ಲಿ ಮೊದಲು ನಾನು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಈ ನೂರು ದಿನಗಳಲ್ಲಿ ನಾಡಿನ ಜನತೆ ಏನು ಬಯಸಿದ್ದರೋ ಪ್ರಮುಖವಾಗಿ ರೈತ ಸಮುದಾಯ ಅದರ ಜೊತೆಯಲ್ಲಿ ನಮ್ಮ ಬಿಜೆಪಿ ಸ್ನೇಹಿತರು ಏನು ಬಯಸಿದ್ದರೋ ಅವರ ಬಯಕೆ ಈಡೇರಿಸುವಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದೆ.


ಜನತಾ ದರ್ಶನ ಮತ್ತು ಹಲವಾರು ಇಲಾಖೆಗಳ ಕಾರ್ಯವೈಖರಿ ಯಾವ ರೀತಿ ನಡೆಯಬೇಕು. ಈ ವರ್ಷ ಬಜೆಟ್ ನಲ್ಲಿ ನೀಡಲಾದ ಭರವಸೆಗಳನ್ನು ಯಾವ ರೀತಿ ಅನುಷ್ಠಾನಕ್ಕೆ ತರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.


ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತೇನೆ ಎನ್ನುವುದರಲ್ಲಿ ತಪ್ಪೇನು?
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಸಿದರಾಮಯ್ಯನವರು ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುತ್ತೇನೆ ಎನ್ನುವುದರಲ್ಲಿ ತಪ್ಪೇನು?
ಅದನ್ನು ಬೇರೆ ರೀತಿ ಅರ್ಥೈಸುವ ಅವಶ್ಯಕತೆ. ಈಗಾಗಲೇ ನಾನು ಹೇಳಿದ್ದೇನೆ, ಸಿದ್ದರಾಮಯ್ಯ ಅವರ ಲೀಡರ್ ಶಿಪ್ ನಲ್ಲಿ  ಈ ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ನಡೆಯಲಿದೆ. ಅವರಿಂದಲೇ ಈ ಸರ್ಕಾರಕ್ಕೆ ರಕ್ಷಣೆಯಿರುತ್ತದೆ ಎಂದು ಹೇಳಿದರು. 


ಕೆಲವು ಹಿರಿಯರು, ಹಿರಿಯರಾದ ಆರ್.ವಿ. ದೇಶಪಾಂಡೆ ಸಿಎಂ ಆಗಬೇಕು ಅಂತಾರೆ ಎನ್ನುತ್ತಾ ಕುಮಾರಸ್ವಾಮಿ ಅವರು ಸನಿಹದಲ್ಲೇ ಇದ್ದ ದೇಶಪಾಂಡೆ ಅವರಿಗೂ ಸಿಎಂ ಆಗುವ ಆಸೆ ಹುಟ್ಟಿಸಿದರು.


ದಾಖಲೆಯ ರೆವಿನ್ಯೂ ಕಲೆಕ್ಷನ್:
ಮೈತ್ರಿ ಸರ್ಕಾರ ರೆವಿನ್ಯೂ ನಲ್ಲಿ ನಾವು ಹಿಂದೆ ಬಿದ್ದಿಲ್ಲ. ಕಳೆದ ಮೂರು ತಿಂಗಳಲ್ಲಿ ಸರ್ಕಾರದ ರೆವಿನ್ಯೂನಲ್ಲಿ ಶೇ. 33ರಷ್ಟು ಏರಿಕೆಯಾಗಿದೆ. ದಾಖಲೆಯ ರೆವಿನ್ಯೂ ಕಲೆಕ್ಷನ್ ತರುವಲ್ಲಿ ನಾವೆಲ್ಲರೂ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ ಎಂದರು. 


ಎರಡು ಪಕ್ಷದ ನಾಯರು ಟೀಂ ಆಗಿ ಕೆಲಸ ಮಾಡಿದ್ದೇವೆ:
ಕೊಡಗು ಜಿಲ್ಲೆ ಸೇರಿದಂತೆ ಕೆಲವು ಭಾಗಗಳಲ್ಲಿ ಆದ ಅನಾಹುತಗಳು ಮತ್ತು ಕೆಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಮಯ ವ್ಯರ್ಥ ಮಾಡದೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ರಾಜ್ಯದ ಜನತೆಗೂ ವಿಶ್ವಾಸ ಮೂಡಿದೆ. 


ಕಂದಾಯ ಸಚಿವರು ಅತಿವೃಷ್ಟಿಯ ಪ್ರದೇಶವಿರಲಿ ಅಥವಾ ಅನಾವೃಷ್ಟಿಯ ಪ್ರದೇಶವಿರಲಿ ತಕ್ಷಣ ಅವರೇ ಖುದ್ದಾಗಿ ಭೇಟಿ ಮಾಡಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ರಾಜ್ಯದ ಪ್ರತಿಯೊಂದು ಭಾಗದಲ್ಲೂ ಜನತೆಗೆ ವಿಶ್ವಾಸ ಗಳಿಸುವಲ್ಲಿ ನಾವು ಒಂದು ಟೀಂ ಆಗಿ ಎರಡೂ ಪಕ್ಷಗಳ ನಾಯಕರು ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.


ಒಂದು ವರ್ಷದ ಹನಿಮೂನ್ ಪೀರಿಯಡ್ ಕೇಳಿಲ್ಲ, ನೂರು ದಿನ ಹನಿಮೂನ್ ಪೀರಿಯಡ್ ಮುಗಿಸಿದ್ದೇವೆ:
ಈ ನೂರು ದಿನಗಳು ಮೈತ್ರಿ ಸರ್ಕಾರದಲ್ಲಿ ಮುಂದಿನ ದಿನದ ಕಾರ್ಯಕ್ರಮಗಳ ಒಂದು ವಿಷನ್ ಅನ್ನು ಅನುಷ್ಠಾನಕ್ಕೆ ತರುವ ವೇದಿಕೆಯನ್ನು ಸೃಷ್ಠಿ ಮಾಡಿದ್ದೇವೆ. ನಾವು ಒಂದು ವರ್ಷದ ಹನಿಮೂನ್ ಪಿರಿಯಡ್ ಕೇಳ್ತಾ ಇಲ್ಲ, ರಾಜ್ಯದ ಜನತೆ ನೀಡಿದ ಈ ನೂರು ದಿನದ ಹನಿಮೂನ್ ಪಿರಿಯಡ್ ನಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಒಟ್ಟಾರೆ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ, ಸಮಗ್ರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಒಂದು ನೀಲಿನಕ್ಷೆಯನ್ನು ತಯಾರಿಸಿದ್ದೇವೆ. ಆ ಕಾರ್ಯಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ಸಮಯ ವ್ಯರ್ಥ ಮಾಡದೆ ಕಾರ್ಯಕ್ರಮಗಳು ಜಾರಿಯಾಗಲಿವೆ  ಎಂದರು. 


ಕಾಂಗ್ರೆಸ್ ಅಧ್ಯಕ್ಷರಿಗೆ ಕೃತಜ್ಞತೆ:
ಈ ನೂರು ದಿನವನ್ನು ಯಶಸ್ವಿಯಾಗಿ ಪೂರೈಸಲು ಕಾಂಗ್ರೇಸ್ ಅಧ್ಯಕ್ಷರು ನೀಡಿರುವ ಸಂಪೂರ್ಣ ಸಹಕಾರದ ಹಿನ್ನೆಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಲು ನಾನು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದರು. ಇದೊಂದು ಸೌಹಾರ್ದಯುತ ಭೇಟಿ. ಆದಷ್ಟು ಬೇಗ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.


ನೆರೆ ಪರಿಹಾರಕ್ಕಾಗಿ ಕೇಂದ್ರ ಗೃಹ ಸಚಿವರ ಭೇಟಿ:
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಆರ್.ವಿ. ದೇಶಪಾಂಡೆ ಜೊತೆಗೂಡಿ ಇಂದು ರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವರನ್ನೂ ಭೇಟಿಮಾಡುವುದಾಗಿ ತಿಳಿಸಿದ ಹೆಚ್‌ಡಿಕೆ, ರಾಜ್ಯದಲ್ಲಿ ಆಗಿರುವ ಅನಾಹುತಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.