ಬೆಂಗಳೂರು: 13 ಶಾಸಕರ ರಾಜೀನಾಮೆಗಳಲ್ಲಿ 8 ಶಾಸಕರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಕೇವಲ ಐವರ ರಾಜೀನಾಮೆಗಳು ಕಾನೂನುಬದ್ಧವಾಗಿವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜೀನಾಮೆ ಪತ್ರಗಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರ್ಯಾರೂ ನನ್ನನ್ನು ಭೇಟಿ ಮಾಡಿಲ್ಲ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಶಾಸಕರು ಸಲ್ಲಿಸಿದ್ದ 13 ರಾಜೀನಾಮೆಗಳಲ್ಲಿ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್‌, ನಾರಾಯಣ ಗೌಡ, ರಾಮಲಿಂಗಾರೆಡ್ಡಿ, ಗೋಪಾಲಯ್ಯ ಅವರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿದ್ದು, ಉಳಿದ 8 ಜನ ಶಾಸಕರ ರಾಜೀನಾಮೆ ರೂಲ್ಸ್ 202ರ ಪ್ರಕಾರ ಕ್ರಮಬದ್ಧವಾಗಿಲ್ಲ. ಈ ಬಗ್ಗೆ ಅವರಿಂದ ಸ್ಪಷ್ಟನೆ ಪಡೆಯಲು ಖುದ್ದಾಗಿ ನನ್ನನ್ನು ಭೇಟಿ ಮಾಡುವಂತೆ ತಿಳಿಸಲಾಗುವುದು ಎಂದು ಹೇಳಿದರು.



ಶಾಸಕರ ರಾಜೀನಾಮೆಗೆ ಸಂಬಂಧಪಟ್ಟಂತೆ ರಾಜ್ಯಪಾಲರೂ ನನಗೆ ಪತ್ರ ಬರೆದಿದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಿದ್ದೇನೆ. ಸಚಿವ ‌ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆಯೂ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಆದರೆ ಈ ವಿಚಾರವನ್ನು ಸಿಎಂ ಬಗೆಹರಿಸಬೇಕು. ಇನ್ನು, ಶಾಸಕರ ಅನರ್ಹತೆ ವಿಚಾರ ವಿಚಾರಣೆ ಹಂತದಲ್ಲಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.