ಬೆಂಗಳೂರು : ನಡೆದಾಡುವ ದೇವರು ಎಂದೇ ಕರೆಯಲಾಗುವ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಸ್ವಾಮಿಜಿಗಳ 111ನೇ ಜನ್ಮ ದಿನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. 


COMMERCIAL BREAK
SCROLL TO CONTINUE READING

ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಗಳಿಗೆ ಶುಭಾಶಯ ಕೋರಿದ್ದಾರೆ. ಶುಭಾಶಯವನ್ನು ಕನ್ನಡದಲ್ಲೇ ಟ್ವೀಟ್​ ಮಾಡಿರುವ ಮೋದಿ, ದೇಶದ ಅತ್ಯಂತ ವಂದನೀಯ ಮತ್ತು ಪೂಜನೀಯ ಗುರುಗಳಲ್ಲಿ ಪೂಜ್ಯ ಶ್ರೀಗಳು ಒಬ್ಬರಾಗಿದ್ದಾರೆ. ತುಮಕೂರಿನ ಶ್ರೀ ಸಿದ್ದಗಂಗಾ ಮಠ ಭಾರತ ದೇಶದ ಹಿರಿಮೆಯಾಗಿದೆ. ಸಮಾಜಕ್ಕೆ ಶಕ್ತಿ ತುಂಬುತ್ತಾ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠ ಮುಂಚೂಣಿಯಲ್ಲಿದೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸುದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಸದಾ ಪ್ರಾರ್ಥಿಸುತ್ತೇನೆ. ಶ್ರೀಗಳ ಮಾರ್ಗದರ್ಶನ ದೇಶಕ್ಕೆ ನಿರಂತರವಾಗಿ ಸಿಗಲಿ" ಎಂದು ಮೋದಿ ಹಾರೈಸಿದ್ದಾರೆ. 



ದೇಶದ ಇತರ ಗಣ್ಯರಿಂದಲೂ ಶ್ರೀಗಳಿಗೆ ಟ್ವೀಟ್ ಮೂಲಕ ಶುಭ ಹಾರೈಕೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಸಹ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. "ಕಾಯಕಯೋಗಿ ಬಸವಣ್ಣನವರ ತತ್ವಗಳನ್ನು ಸಮಾಜದ ಉನ್ನತಿಗಾಗಿ ಪಸರಿಸಲು ಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀ ಶಿವಕುಮಾರ ಸ್ವಾಮಿಜಿಗಳಿಗೆ ಜನ್ಮ ದಿನದ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ.



ಶ್ರೀಗಳ 111ನೇ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೂ ಸಹ ಶುಭಾಶಯ ಕೋರಿದ್ದಾರೆ. "ದುರ್ಬಲರ ಸಬಲೀಕರಣ ಮುಂತಾದ ತತ್ವಗಳಿಗೆ ಸಂಪೂರ್ಣ ಬದ್ಧರಾಗಿ ಸಾಮಾಜಿಕ ಸೇವೆಯನ್ನೇ ಬದುಕನ್ನಾಗಿಸಿಕೊಂಡಿರುವ ಸಿದ್ದಗಂಗಾ ಮಠಾಧೀಶರಾದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು 111ನೇ ಜನ್ಮದಿನೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಸಂತಸ ನೀಡಿದೆ. ನಿಮ್ಮ ಸೇವೆ ಹೀಗೆ ನಿರಂತರ ಸಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.



ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು "ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಅನುಗ್ರಹದಿಂದ ಕತ್ತಲಲ್ಲಿ ಕಂಗೆಟ್ಟ ಜನರ ಬಾಳಿನಲ್ಲಿ ಬೆಳಕು‌ ಮೂಡಲಿ. ಅವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯ, ಶ್ರೀಗಳಿಗೆ ದೀರ್ಘಾಯುಷ್ಯ ಕರುಣಿಸಲೆಂದು ಶಿವನಲ್ಲಿ  ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡುವ ಮೂಲಕ ಶ್ರೀಗಳಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ. ಹಾಗೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕೂಡ ಶುಭಾಶಯ ಕೋರಿದ್ದಾರೆ. 




ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ಶ್ರೀಗಳಿಗೆ ಶುಭಾಶಯ ಕೋರಿದ್ದಾರೆ.