ಕರ್ನಾಟಕ ಪ್ರವಾಹ : ಕೇಂದ್ರದಿಂದ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಪ್ರಧಾನಿ ಮೋದಿ ಭರವಸೆ
ರಾಜ್ಯಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೊಡಗು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ರಾಜ್ಯಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಕರ್ನಾಟಕದಲ್ಲಿ ಎದುರಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಅದರಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೊಡಗಿನಲ್ಲಿ ಪರಿಹಾರ ಕಾರ್ಯಾಚರಣೆ ಭರದಿಂದ ನಡೆಯುತ್ತಿದ್ದು, ಸೇನಾ ಸಿಬ್ಬಂದಿ, ಎನ್.ಡಿ.ಆರ್.ಎಫ್. ಮತ್ತು ಇತರ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಇದುವರೆಗೂ 3500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ವಿವರಣೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಕರ್ನಾಟಕ ಪ್ರವಾಹಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ರಾಜ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದೇನೆ. ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಎಲ್ಲಾ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ನೀಡಲು ಬದ್ಧವಾಗಿದೆ. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಸಹ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.
ಶನಿವಾರ ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಭಾನುವಾರವೂ ಸಹ ಕೊಡಗಿನಲ್ಲಿ ವೈಮಾನಿಕ ಸಮೀಕ್ಷೆಗೆ ತೆರಳಿ ಸೋಮವಾರಪೇಟೆ, ಶುಂಠಿ ಕೊಪ್ಪ, ಮಾದಾಪುರ, ಮುಕ್ಕೋಡ್ಲು, ಹಾರಂಗಿ ಹಿನ್ನೀರು ಪ್ರದೇಶ, ಸಿದ್ದಾಪುರ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ನಡೆಸಿದ್ದಾರೆ.ಅಲ್ಲದೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಜತೆಗೆ ಸೋಮವಾರಪೇಟೆ ತಾಲೂಕು ಹಾಗೂ ನೆರೆಯ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಅತಿವೃಷ್ಟಿಯ ಪರಿಣಾಮಗಳ ಪರಿಶೀಲನೆ ನಡೆಸಿದ ಸಿಎಂ ಕುಮಾರಸ್ವಾಮಿ ಅವರು, ಆವರ್ತ ಗ್ರಾಮದಲ್ಲಿ ಅತಿವೃಷ್ಟಿಯಿಂದ ನೊಂದವರಿಗೆ ಪರಿಹಾರದ ಚೆಕ್ ಗಳನ್ನು ವಿತರಿಸಿದರು.
ಈಗಾಗಲೇ ರಾಜ್ಯದ ಪ್ರವಾಹ ಪರಿಹಾರ ನಿರ್ವಹಣೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 200 ಕೋಟಿ ರೂ.ಗಳನ್ನೂ ಘೋಷಣೆ ಮಾಡಿದ್ದಾರೆ. ಅಲ್ಲದೆ, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 2 ಲಕ್ಷ ರೂ. ಪರಿಹಾರ ಧನ ಹಾಗೂ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ.