ಸೂಲಗಿತ್ತಿ ನರಸಮ್ಮ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ
ಕಳೆದ 70 ವರ್ಷಗಳಿಂದ ಹದಿನೈದು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ನರಸಮ್ಮಗೆ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ನವದೆಹಲಿ: ಹದಿನೈದು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ, ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಅವರ ನಿಧನದಿಂದ ದುಃಖವಾಗಿದೆ. ಕರ್ನಾಟಕದಲ್ಲಿ ಅವರ ಸೂಲಗಿತ್ತಿ ಸೇವೆ ನೀಡುವ ಪ್ರಯತ್ನ ಸದಾ ಸ್ಮರಣೀಯ. ಸಮಾಜದ ಬಡ ವರ್ಗಕ್ಕೆ ಅವರು ತೋರಿದ ದಯಾಳುತನ ಎಲ್ಲರನ್ನೂ ಆಕರ್ಷಿಸಿತ್ತು. ಅವರ ಕುಟುಂಬಕ್ಕೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಾಂತ್ವನ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 98ವರ್ಷ ವಯಸ್ಸಾಗಿತ್ತು. ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ನರಸಮ್ಮ ಕಳೆದ 25 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ, ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಾಪುರ ಮೂಲದವರಾದ ನರಸಮ್ಮ ಆಂಜಿನಪ್ಪ ಅವರು, ‘ನರ್ಸಮ್ಮ’ ಎಂದೇ ಪರಿಚಿತರಾಗಿದ್ದರು.