ಕಲಬುರಗಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಪಣ ತೊಟ್ಟಿರುವ ಬಿಜೆಪಿ ಕಲಬುರಗಿಯಲ್ಲಿಂದು ಮೆಗಾ ರ‍್ಯಾಲಿ ಆಯೋಜಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಮೆಗಾ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಈ ಹಿಂದೆ ಗಂಡು ಮೆಟ್ಟಿದ ನಾಡಿನಲ್ಲಿ ಬೃಹತ್ ರ‍್ಯಾಲಿಯಲ್ಲಿ ಮೂಲಕ ಚುನಾವಣೆ ಕಹಳೆ ಮೊಳಗಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಮಾತನಾಡಿ, "ಈ ಭೂಮಿ, ತ್ಯಾಗ, ಸಾಹಸ, ಶೌರ್ಯ, ಇತಿಹಾಸ, ಸಂಸ್ಕೃತಿಗೆ ಹೆಸರು. ನನಗೆ ಈ ಪುಣ್ಯ, ಪವಿತ್ರ ಭೂಮಿಗೆ ಬಂದಿದ್ದಕ್ಕೆ ರೋಮಾಂಚನವಾಗಿದೆ" ಎಂದಿದ್ದರಲ್ಲದೆ, ಕರ್ನಾಟಕದ ಮುಖ್ಯಮಂತ್ರಿಗೆ ಪ್ರತಿದಿನ ಧಮ್ಕಿಗಳು ಬರುತ್ತಿವೆ. ಆದ್ದರಿಂದ ಅಸಹಾಯಕತೆಯಿಂದ ರಾತ್ರಿಯೆಲ್ಲಾ ಅಳುತ್ತಿರುತ್ತಾರೆ ಎಂದು ವ್ಯಂಗವಾಡಿದ್ದರು.


ಇದೀಗ ಇಂದು ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಕಲಬುರುಗಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರನ್ನು ಈ ಬಾರಿ  ಶತಾಯಗತಾಯ ಸೋಲಿಸಲೇಬೇಕು. ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಬೇಕೆಂಬ ಬಿಜೆಪಿ ಇರಾದೆಯಿಂದಾಗಿ ಈ ಕಾರ್ಯಕ್ರಮ ರಾಜಕೀಯ ಮಹತ್ವ ಪಡೆದಿದೆ. ಇದಕ್ಕೆ ಪೂರಕವಾಗಿ, ಮಲ್ಲಿಕಾರ್ಜುನ ಖರ್ಗೆ ಎದುರು ಸ್ಪರ್ಧಿಸುವ ಉದ್ದೇಶದಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ. ಉಮೇಶ ಜಾಧವ್‌ ಈ ಸಂದರ್ಭದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಕಲಬುರಗಿ ಭೇಟಿ ವೇಳೆ "ಆಯುಷ್ಮಾನ್‌ ಭಾರತ ಯೋಜನೆ" ಫಲಾನುಭವಿಗಳೊಂದಿಗೆ ಸಂವಾದ, ಬಿಪಿಸಿಎಲ್‌ ಡಿಪೋಗೆ ಭೂಮಿ ಪೂಜೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.