ಬೆಂಗಳೂರು:  'ಬಿಜೆಪಿ ಸರ್ಕಾರವು ಪೊಲೀಸರು ತಮ್ಮ ಅಣತಿಯಂತೆ ನಡೆಯಬೇಕು ಎಂದು ಬಯಸುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ. ಈ ಕುರಿತಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು 'ಪೊಲೀಸರನ್ನು ಪಕ್ಷದ ಕಾರ್ಯಕರ್ತರಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಉಡುಪಿಯಲ್ಲಿ ಪೊಲೀಸರ ಸಮವಸ್ತ್ರ ಬದಲು ಕೇಸರಿ ಬಟ್ಟೆ ತೊಡಿಸಿದ್ದರು.ಮುಖ್ಯಮಂತ್ರಿಗಳು ನೈತಿಕ ಪೊಲೀಸ್ ಗಿರಿಗೆ ಬೆಂಬಲ ಸೂಚಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರನ್ನೂ ಅವರ ಪಕ್ಷದ ಕಾರ್ಯಕರ್ತರಂತೆ ಬಳಸಿಕೊಳ್ಳುತ್ತಿದ್ದಾರೆ’ಎಂದು ಆರೋಪಿಸಿದರು.


COMMERCIAL BREAK
SCROLL TO CONTINUE READING

ಅವರ ಈ ಹೇಳಿಕೆ ಇತ್ತೀಚೆಗೆ ಮಂಗಳೂರಿನಲ್ಲಿ ದೇವಾಲಯದ ಹೊರಗೆ ಎಳನೀರು ವ್ಯಾಪಾರ ಮಾಡುವುದನ್ನು ತಡೆದಿದ್ದ ಭಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅವರು ಪ್ರತಿಕ್ರಿಯಿಸಿದ್ದಾರೆ.


'ಪಕ್ಷದ ನೂತನ ಪದಾಧಿಕಾರಿಗಳ ಮೊದಲ ಸಭೆ ಇಂದು ನಡೆಸಿದ್ದು, ಪಕ್ಷದ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ.ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಜನರ ಮುಂದೆ ತೆಗೆದುಕೊಂಡು ಹೋಗಲು ಕಾರ್ಯಕ್ರಮ ರೂಪಿಸಿದ್ದೇವೆ.


ಎಲ್ಲ ಪದಾಧಿಕಾರಿಗಳು ಪಂಚಾಯ್ತಿ ಮಟ್ಟಕ್ಕೆ ಹೋಗಿ, ಪಕ್ಷದ ಸಂಘಟನೆ ಮಾಡುವುದರ ಜತೆಗೆ ಸರ್ಕಾರದ ವೈಫಲ್ಯ, ನಮ್ಮ ಸರ್ಕಾರದ ಸಾಧನೆಯನ್ನು ಜಿಲ್ಲಾವಾರು, ತಾಲೂಕುವಾರು  ಜನರಿಗೆ ತಿಳಿಸಲು ಜವಾಬ್ದಾರಿ ಹಂಚಿಕೊಳ್ಳಲಾಗಿದೆ' ಎಂದರು


ಇದನ್ನೂ ಓದಿ: ಬಿಜೆಪಿದು ದೌರ್ಭಾಗ್ಯದ ಸರ್ಕಾರ : ಸಿದ್ದರಾಮಯ್ಯ


ನಾವು 24/7 ಸಮಯವನ್ನು ಮುಡುಪಿಡಬೇಕು ಎಂದು ಚರ್ಚಿಸಿದ್ದೇವೆ.ಪ್ರತಿ ಬೂತ್ ನಿಂದ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಲು, ಯುವಕರು, ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದವರು, ರೈತರು, ಕಾರ್ಮಿಕರ ಪರವಾಗಿ ಪಕ್ಷ ಹೇಗೆ ನಿಲ್ಲಬೇಕು ಎಂಬುದನ್ನು ಚರ್ಚಿಸಿದ್ದು, ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸಲು, ಜನ ಏನನ್ನು ಬಯಸುತ್ತಿದ್ದಾರೆ ಎಂಬ ಅಭಿಪ್ರಾಯ ಸಂಗ್ರಹ ಮಾಡಲು ಕಾರ್ಯಕ್ರಮ ರೂಪಿಸಿದ್ದೇವೆ.’ಎಂದು ಡಿಕೆಶಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ಇಂಧನ ದರದ ಮೇಲಿನ ಸುಂಕ ಕಡಿತಗೊಳಿಸುವಂತೆ ಕೊಟ್ಟಿರುವ ಸಲಹೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಪ್ರಧಾನಿಗಳು ರಾಜ್ಯಗಳ ಬದಲು ದೇಶದ ವಿಚಾರವಾಗಿ ಮಾತನಾಡಬೇಕು. ಪ್ರಧಾನ ಮಂತ್ರಿಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಬಕಾರಿ ಸುಂಕ ಕಡಿತಗೊಳಿಸಿ ಮಾದರಿಯಾಗಿ ನಿಂತು ನಂತರ ಬೇರೆ ರಾಜ್ಯಗಳಿಗೆ ಹೇಳಬೇಕು.


ಪ್ರತಿ ಬಂಕ್ ಗಳಲ್ಲೂ ಮೋದಿ ಅವರು ಸಿಲಿಂಡರ್ ನೀಡುವ ಫೋಟೋ ಹಾಕಿರುತ್ತಾರೆ. ಈಗ ಸಿಲಿಂಡರ್ ಗಳ ಬೆಲೆ ಏನಾಗಿದೆ? ಅವುಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಏನಾಯಿತು? ಅವರು ತಮ್ಮ ಫೋಟೋ ಹಾಕಿಕೊಳ್ಳುವುದಾದರೆ ಅದರ ಪಕ್ಕದಲ್ಲೇ ಗ್ಯಾಸ್ ಬೆಲೆಯನ್ನು ಹಾಕಬೇಕಲ್ಲವೇ?’ ಎಂದು ಅವರು ಪ್ರಶ್ನಿಸಿದರು.


ಇಂಧನದ ಮೇಲಿನ ಸುಂಕ ಇಳಿಕೆ ವಿಚಾರವಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ನಂತರ ತೀರ್ಮಾನ ಮಾಡುವ ಮುಖ್ಯಮಂತ್ರಿಗಳ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾನು ಈ ವಿಚಾರವನ್ನು ರಾಜ್ಯಮಟ್ಟದಲ್ಲಿ ಮಾತನಾಡುವುದಕ್ಕಿಂತ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನಾಯಕರು ತಮ್ಮ ರಾಜ್ಯಗಳಿಗೆ ಸೂಚನೆ ನೀಡಲಿ’ ಎಂದರು.


ಇದನ್ನೂ ಓದಿ: ಕೋವಿಡ್ ಅನಾವಶ್ಯಕ ನಿರ್ಬಂಧ, ಆತಂಕ ಬೇಡ : ಪ್ರಧಾನಿ ಮೋದಿ‌ ಸೂಚನೆ


ಇನ್ನು ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ನೀಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕೋವಿಡ್ ವಿಚಾರದಲ್ಲಿ ನಾವು ಎಚ್ಚರಿಕೆ ವಹಿಸಬೇಕು. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ಅದೇ ಸಮಯದಲ್ಲಿ ಎಲ್ಲ ಜನರ ಬಗ್ಗೆಯೂ ಯೋಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ. ಅದನ್ನು ಅವರು ನಿಭಾಯಿಸಲು, ನಾವು ಹಸ್ತಕ್ಷೇಪ ಮಾಡುವುದಿಲ್ಲ. ಕೋವಿಡ್ ಹೆಸರಲ್ಲಿ ತಮ್ಮ ವಿರುದ್ಧ ನಡೆಯುವ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹೆಸರಲ್ಲಿ ನನ್ನ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರ ನಾಯಕರು ನಿಯಮ ಉಲ್ಲಂಘಿಸಿದ್ದರೂ ನಮ್ಮ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದಾರೆ' ಎಂದರು.


ಇನ್ನು ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಲಿಸುವ ವಿಚಾರವಾಗಿ ಉದ್ಭವಿಸಿರುವ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, 'ಈಗ ಶಾಲೆಗಳಲ್ಲಿ ಯಾವ ರೀತಿ ವ್ಯವಸ್ಥೆಗಳು ಜಾರಿಯಲ್ಲಿವೆಯೋ ಅವುಗಳನ್ನು ಮುಂದುವರಿಯಲು ಬಿಡಬೇಕು. ದೇಶದಲ್ಲಿ ಸಂವಿಧಾನವಿದ್ದು, ಅದರಂತೆ ನಾವು ನಡೆಯಬೇಕು’ಎಂದು ಅವರು ಉತ್ತರಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.