ದ್ವೇಷದ ರಾಜಕಾರಣ ಸಹಿಸಲು ಸಾಧ್ಯವೇ ಇಲ್ಲ: ದಿನೇಶ್ ಗುಂಡೂರಾವ್
ಡಿ.ಕೆ.ಶಿವಕುಮಾರ್ ಅವರು ತನಿಖೆಗೆ ಸಹಕಾರ ನೀಡಿದರೂ ಸಹ ಅವರಿಗೆ ಕಿರುಕುಳ ನೀಡುವ ಸಲುವಾಗಿಯೇ ಅವರನ್ನು ಬಂಧಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಬೆಂಗಳೂರು: ಬಿಜೆಪಿಯವರ ದ್ವೇಷದ ರಾಜಕಾರಣವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಬಂಧನವನ್ನು ಖಂಡಿಸಿ ನಗರದಲ್ಲಿಂದು ಒಕ್ಕಲಿಗ ಸಮುದಾಯದವರು ಕರೆ ನೀಡಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಐಟಿ, ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಡಿ.ಕೆ.ಶಿವಕುಮಾರ್ ಅವರು ತನಿಖೆಗೆ ಸಹಕಾರ ನೀಡಿದರೂ ಸಹ ಅವರಿಗೆ ಕಿರುಕುಳ ನೀಡುವ ಸಲುವಾಗಿಯೇ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ, ಇಂದಿನ ಪ್ರತಿಭಟನೆಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದಾರೆ. ಇದು ಕೇಂದ್ರಕ್ಕೆ ನೀಡಿರುವ ಪ್ರತ್ಯುತ್ತರ. ವಿರೋಧ ಪಕ್ಷದವರನ್ನು ಮುಗಿಸಲು ನೀವು ತಂತ್ರ ಹೆಣೆದಿದ್ದರೆ ಅದು ಖಂಡಿತಾ ಸಾಧ್ಯವಿಲ್ಲ. ದ್ವೇಷದ ರಾಜಕಾರಣವನ್ನು ಖಂಡಿತಾ ಸಹಿಸುವುದಿಲ್ಲ ಎಂಬ ಸಂದೇಶವನ್ನು ಇಲ್ಲಿ ನೆರೆದಿರುವ ಜನರೇ ನೀಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.