ಬೆಂಗಳೂರು: ವಿಧಾನ ಸಭಾ ಚುನಾವಣಾ ದೃಷ್ಟಿಯಿಂದ ವಿಸ್ತಾರಕ್ ಬೂತ್ ಸಶಕ್ತೀರಣ ಅಭಿಯಾನಕ್ಕೆ ಚಾಲನೆ ನೀಡಿದ್ದರೂ ನಿಶ್ಚಿತ ಗುರಿ ಮುಟ್ಟುವಲ್ಲಿ ಬಿಜೆಪಿ ಹಿಂದೆ ಬೆದ್ದಿದೆ ಎಂದು ರಾಜ್ಯ ನಾಯಕರ ಕಾರ್ಯವೈಖರಿ ಬಗ್ಗೆ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದರಿಂದ ಅಸಮಾಧಾನಗೊಂಡಿರುವ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ 20 ದಿನ ಗಡುವು ವಿಸ್ತರಿಸಿದ್ದು, ಬಿಜೆಪಿ ನಾಯಕರು ಪಕ್ಷದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದ್ದಾರೆ.


ರಾಜ್ಯದಲ್ಲಿ ಇತರೆ ಪಕ್ಷಗಳಿಗೆ ಹೋಲಿಸಿದರೆ ದಶಕಗಳ ಮೊದಲೇ ಬಿಜೆಪಿ ಬೂತ್ ಸಮಿತಿ ರಚನೆ ಆರಂಭಿಸಿತ್ತು. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗಿನಂಥ ಜಿಲ್ಲೆಗಳಲ್ಲಿ ಶೇ.100 ಬೂತ್​ನಲ್ಲೂ ಸಮಿತಿ ರಚಿಸಿ ಸದೃಢ ಗೊಳಿಸಲಾಗಿತ್ತು. ರಾಜ್ಯದ ಇತರೆಡೆಯೂ ಬೂತ್ ಸಮಿತಿ ರಚನೆ ನಡೆದಿತ್ತು. 54 ಸಾವಿರ ಬೂತ್​ಗಳ ಪೈಕಿ ಸುಮಾರು 30 ಸಾವಿರದಷ್ಟರಲ್ಲಿ ಸಮಿತಿಗಳಿದ್ದವು. ಇತ್ತೀಚೆಗೆ ಬೆಂಗಳೂರಿನಲ್ಲಿ 3 ಹಂತದ ಬೂತ್ ಸಶಕ್ತೀಕರಣ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮತಗಟ್ಟೆ ಸಮಿತಿ ರಚನೆ, ಸೆ.25-ಅ.5ರವರೆಗೆ ಮತಗಟ್ಟೆ ಅಧ್ಯಯನ, ಅ.6-18ರವರೆಗೆ ಮತಗಟ್ಟೆ ಬೂತ್ ಸಮಿತಿ ರಚನೆ, ಮತಗಟ್ಟೆಗಳಿಗೆ ಎ, ಬಿ, ಸಿ, ಗ್ರೇಡ್ ನೀಡಿಕೆ, ಎಲ್ಲ ಮತಗಟ್ಟೆ ಸಮಿತಿ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಾಡಬೇಕಿತ್ತು. 


ಆದರೆ, ಇಲ್ಲಿಯವರೆಗೆ ಕೇವಲ 44 ಸಾವಿರ ಸಮಿತಿಗಳಷ್ಟೇ ರಚನೆಯಾಗಿವೆ. ರಚನೆಯಾಗಿರುವ ಸಮಿತಿಗಳಲ್ಲೂ ಅನೇಕ ಕಡೆ ಲೋಪದೋಷಗಳಿವೆ. ಇಂಥ ದುರ್ಬಲ ಸಮಿತಿಗಳ ಜತೆ ಚುನಾವಣೆಗೆ ತೆರಳಲು ಸಾಧ್ಯವಿಲ್ಲ ಎಂದಿರುವ ಜಾವಡೇಕರ್ ಮೂರು ದಿನದ ಹಿಂದೆ ನಡೆದ ಕೋರ್ ಕಮಿಟಿ ಹಾಗೂ ಬೂತ್ ಸಶಕ್ತೀಕರಣ ಸಮಿತಿ ಸಭೆಯಲ್ಲಿ ಎಲ್ಲ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ಚುನಾವಣೆ ಗೆಲುವಿಗೆ ಇತರೆ ಪಕ್ಷಗಳ ಹೋಲಿಕೆಯಲ್ಲಿ ಬಿಜೆಪಿಗಿರುವ ವ್ಯತ್ಯಾಸವೇ ಸಬಲ ಮತಗಟ್ಟೆ ಸಮಿತಿ. ಇದರಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಬೂತ್ ಸಶಕ್ತೀರಣಕ್ಕಾಗಿ ನ.10ರ ವರೆಗೆ ಅಂತಿಮ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಅಭಿಯಾನ ಮುಕ್ತಾಯ ಆಗಲೇಬೇಕೆಂದು ರಾಜ್ಯ ಬಿಜೆಪಿ ಉಸ್ತುವಾರಿ ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.